ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣ : ಎಸ್ ಐ ಟಿ ಯಿಂದ ಮಹತ್ವದ ವಿಚಾರಣೆ

ಶೇರ್ ಮಾಡಿ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ಎಸ್‌ಐಟಿ ತನಿಖೆ ಸಂಬಂಧಿಸಿ ಸೌಜನ್ಯಾ ಪರ ಹೋರಾಟಗಾರರೆಂದು ಗುರುತಿಸಿಕೊಂಡಿರುವ ನಾಲ್ವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು, ಹೀಗಾಗಿ ಅ.27ರ ವಿಚಾರಣೆಯು ಬಹಳ ಮಹತ್ವವನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ರವಿವಾರವೂ ಬೆಳ್ತಂಗಡಿಯಲ್ಲೇ ಇದ್ದು ಅಧೀನ ಅಧಿಕಾರಿಗಳ ಜತೆ ಸಭೆ ನಡೆಸಿದೆ.

ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ. ಹಾಗೂ ವಿಠಲ ಗೌಡರಿಗೆ ಎಸ್‌ಐಟಿ ಮುಖ್ಯ ತನಿಖಾಧಿಕಾರಿಯಾಗಿರುವ ಜಿತೇಂದ್ರ ಕುಮಾರ್‌ದಯಾಮ ಅವರು ಅ. 27ರಂದು ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಲಾಗಿದೆ. ಜತೆಗೆ ವಿಚಾರಣೆಯ ಬಳಿಕ ವಶಕ್ಕೆ ಪಡೆಯುವ ಸಾಧ್ಯತೆಯ ಮಾತುಗಳು ಕೇಳಿ ಬರುತ್ತಿವೆ.

ಈ ವಿಚಾರಣೆಯ ಹಿನ್ನೆಲೆಯಲ್ಲಿ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು 2 ದಿನಗಳ ಮೊದಲೇ ಬೆಳ್ತಂಗಡಿಗೆ ಆಗಮಿಸಿ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದು, 27ರ ವಿಚಾರಣೆ ಮುಗಿದ ಬಳಿಕವೇ ಅವರು ಬೆಂಗಳೂರಿಗೆ ವಾಪಾಸಾಗಲಿದ್ದಾರೆ ಎನ್ನಲಾಗಿದೆ. ಈ ನಾಲರ ವಿಚಾರಣೆಯ ಬಳಿಕ ಒಟ್ಟು ಪ್ರಕರಣದ ಎಸ್‌ಐಟಿ ತನಿಖೆಯು ಒಂದು ಹಂತಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಸುಜಾತಾ ಭಟ್‌ಗೂ ನೋಟಿಸ್
ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರಿಗೆ ನೋಟಿಸ್ ಕೊಟ್ಟ ಬೆನ್ನಲ್ಲೇ ಎಸ್‌ಐಟಿಯು ಸುಜಾತಾ ಭಟ್‌ಗೆ ಕೂಡ ನೋಟಿಸ್‌ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಹೊಸದಿಲ್ಲಿಗೆ ಭೇಟಿ ನೀಡಿರುವ ವಿಚಾರದ ಜತೆಗೆ ಚಿನ್ನಯ್ಯನಿಗೆ ಆಶ್ರಯ ನೀಡಿರುವ ಕುರಿತು ಅ. 27ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ಪ್ರತಿಭಟನೆಗೆ ಅನುಮತಿ ಇಲ್ಲ
ಮಹೇಶ್ ಶೆಟ್ಟಿ ತಿಮರೋಡಿಯ ಪರ ಅವರ ಬೆಂಬಲಿಗರು ಅ. 27ರಂದು ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಅನುಮತಿ ಕೇಳಿದೆ. ಆದರೆ ಪೊಲೀಸ್ ಇಲಾಖೆಯು ಅನುಮತಿ ನಿರಾಕರಿಸಿ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಗಡೀಪಾರು ವಿಚಾರಕ್ಕೆ ಸಂಬಂಧಿಸಿ ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಅನಿಲ್‌ಕುಮಾರ್‌ಅಂತರ ಅವರು ಪ್ರತಿಭಟನೆಗೆ ಅನುಮತಿಯನ್ನು ಕೇಳಿದ್ದರು. ಪ್ರಕರಣವು ಹೈಕೋರ್ಟ್ ನಲ್ಲಿ ವಿಚಾರಣೆಯಲ್ಲಿರುವುದರಿಂದ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ಪೊಲೀಸರ ಸೂಚನೆಯನ್ನು ಉಲ್ಲಂಘಿಸಿದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆ ಕೂಡ ನೀಡಲಾಗಿದೆ.

  •  

Leave a Reply

error: Content is protected !!