

ನೆಲ್ಯಾಡಿ: ನೆಲ್ಯಾಡಿ ಭಾಗದಲ್ಲಿ ವಂಚನಾ ಜಾಲವೊಂದು ಕಳೆದ ಕೆಲ ದಿನಗಳಿಂದ ಸಕ್ರೀಯವಾಗಿದ್ದು, ವರ್ತಕರಿಂದ ಹಣ ದೋಚಲು ವಿಫಲ ಯತ್ನ ನಡೆದಿರುವ ಘಟನೆ ವರದಿಯಾಗಿದೆ.
ಎರಡು ದಿನಗಳ ಹಿಂದೆ ನೆಲ್ಯಾಡಿಯ ಶುಚಿ ಚಿಕನ್ ಸೆಂಟರ್ ಮಾಲಕ ಚೇತನ್ ಪಿಲವೂರು ಅವರಿಗೆ ವಂಚನೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ನ.4 ರಂದು ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಚೇತನ್ ಅವರಿಗೆ ಫೋನ್ ಮಾಡಿ ನಾನು ಸೈನಿಕ, ನಾಳೆ ನೆಲ್ಯಾಡಿಯಲ್ಲಿ ಆರ್ಮಿ ಕ್ಯಾಂಪ್ ಇದೆ, ನಮಗೆ ಬಿರಿಯಾನಿಗೆ 10 ಕೆ.ಜಿ. ಕೋಳಿ ಮಾಂಸ ಬೇಕು ಎಂದು ಹೇಳಿದ್ದ.
ನ.5 ರಂದು ಬೆಳಿಗ್ಗೆ ಮತ್ತೆ ಕರೆ ಮಾಡಿದ ಆ ವ್ಯಕ್ತಿ ಮಾಂಸ ರೆಡಿ ಆದ ಮೇಲೆ ಫೋನ್ ಮಾಡಿ, ವಾಹನ ಕಳುಹಿಸುತ್ತೇನೆ ಎಂದು ಹೇಳಿ ಫೋನ್ ಕಟ್ ಮಾಡಿದ್ದ. ಬಳಿಕ ಫೋನ್ ಪೇ ಮೂಲಕ 10 ರೂ. ಕಳುಹಿಸಿ ಬಂದಿದೆಯಾ? ಎಂದು ಕೇಳಿದ್ದ. ಚೇತನ್ ಅವರಿಂದ ಬಂದಿದೆ ಎಂಬ ಉತ್ತರ ಬಂದ ತಕ್ಷಣ, ಮಾಂಸದ ಬೆಲೆ ರೂ.2290 ಎಂದು ತಿಳಿಸಿದಾಗ, ನಾನು ರೂ.2300 ಕಳುಹಿಸುತ್ತೇನೆ ಎಂದು ಹೇಳಿದ್ದಾನೆ.
ಆದರೆ ಕೆಲ ಕ್ಷಣಗಳ ಬಳಿಕ ಚೇತನ್ ಅವರ ಮೊಬೈಲ್ ಇನ್‌ಬಾಕ್ಸ್‌ಗೆ ರೂ.23,000 ಜಮೆ ಆಗಿದೆ ಎಂಬ ನಕಲಿ ಸಂದೇಶ ಬಂದಿದ್ದು, ಅದನ್ನು ನಂಬಿಸಲು ಪ್ರಯತ್ನಿಸಿದ ಅಪರಿಚಿತ ಒಂದು ಸೊನ್ನೆ ಹೆಚ್ಚು ಹಾಕಿಬಿಟ್ಟಿದ್ದೇನೆ, 20 ಸಾವಿರ ಹಿಂತಿರುಗಿಸಿ ಎಂದು ಒತ್ತಾಯಿಸಿದ್ದ.
ಚೇತನ್ ಅವರು ಫೋನ್ ಪೇ ಪರಿಶೀಲಿಸಿದಾಗ ಹಣ ಜಮೆಯಾಗಿಲ್ಲವೆಂದು ಕಂಡು ಬಂದಿತ್ತು. ಇದನ್ನು ಅಪರಿಚಿತನಿಗೆ ತಿಳಿಸಿದರೂ, ಆತ ಹಣ ವರ್ಗಾಯಿಸಿದರೆ ನಿಮಗೆ ನನ್ನ ಮೊತ್ತ ಕ್ರೆಡಿಟ್ ಆಗುತ್ತದೆ ಎಂದು ನಂಬಿಸಲು ಯತ್ನಿಸಿದ್ದ. ಚೇತನ್ ಅವರು ಬುದ್ಧಿವಂತಿಕೆಯಿಂದ ಪ್ರತಿಕ್ರಿಯಿಸಿ, ನಾನು ಬ್ಯುಸಿಯಾಗಿದ್ದೇನೆ, ರಿಕ್ಷಾ ಕಳುಹಿಸಿ ನಂತರ ನೋಡೋಣ ಎಂದು ಹೇಳಿ ಫೋನ್ ಕಟ್ ಮಾಡಿದರು. ಬಳಿಕ ಆ ಅಪರಿಚಿತ ಸಂಪರ್ಕಕ್ಕೂ ಸಿಕ್ಕಿಲ್ಲ.
ಈ ರೀತಿಯ ವಂಚನೆ ಯತ್ನಗಳು ನೆಲ್ಯಾಡಿಯ ಅಲ್ಯೂಮಿನಿಯಂ ಅಂಗಡಿ ಮತ್ತು ಬೇಕರಿಯೊಂದಕ್ಕೂ ನಡೆದಿರುವುದಾಗಿ ವರದಿಯಾಗಿದೆ.
ಬ್ಯಾಂಕ್ ಮುಂದೆ ಅನುಮಾನಾಸ್ಪದ ಅಪರಿಚಿತ:
ಎರಡು ಮೂರು ದಿನಗಳ ಹಿಂದೆ ಬೆನ್ನಿನಲ್ಲಿ ಬ್ಯಾಗ್ ನೇತಾಡಿಸಿಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತಾ ಅಪರಿಚಿತ ವ್ಯಕ್ತಿಯೋರ್ವ ನೆಲ್ಯಾಡಿಯ ವಿವಿಧ ಬ್ಯಾಂಕ್‌ಗಳ ಮುಂದೆ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಈ ದೃಶ್ಯಾವಳಿಗಳನ್ನು ಸ್ಥಳೀಯ ವರ್ತಕರು ವಾಟ್ಸಪ್ ಗ್ರೂಪ್‌ಗಳಲ್ಲಿ ಹಂಚಿಕೊಂಡಿದ್ದು, ಈತನ ಬಗ್ಗೆ ಮಾಹಿತಿ ದೊರೆತಲ್ಲಿ ನೆಲ್ಯಾಡಿ ಹೊರಠಾಣೆಗೆ ತಕ್ಷಣ ತಿಳಿಸಲು ವಿನಂತಿಸಲಾಗಿದೆ.






