

ಕೊಕ್ಕಡ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಕೆಲ ತಿಂಗಳುಗಳ ಹಿಂದೆ ವಿದ್ಯಾರ್ಥಿಗಳ ಹಾಗೂ ಪ್ರಯಾಣಿಕರ ಬೇಡಿಕೆ ಪರಿಗಣಿಸಿ ಧರ್ಮಸ್ಥಳದಿಂದ ಗ್ರಾಮೀಣ ಭಾಗಗಳಿಗೆ ಹೊಸ ಬಸ್ ರೂಟ್‌ಗಳಿಗೆ ಚಾಲನೆ ನೀಡಿದ್ದರು.
ಈ ಪೈಕಿ ಧರ್ಮಸ್ಥಳದಿಂದ ಕೊಕ್ಕಡ – ನೆಲ್ಯಾಡಿ – ಬಲ್ಯ – ಕಡಬ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಮೂರು ವಾರಗಳಿಂದ ಭಾನುವಾರ ಸಂಚಾರ ನಿಲ್ಲಿಸಿದೆ.
ಈ ಬಸ್ ಕೌಕ್ರಾಡಿ, ನೆಲ್ಯಾಡಿ, ಬಲ್ಯ, ಕೊಕ್ಕಡ ಹಾಗೂ ಕಡಬ ಭಾಗದ ಜನರಿಗೆ ಮಹತ್ವದ ಬಸ್ಸಾಗಿತ್ತು. ವಿದ್ಯಾರ್ಥಿಗಳು, ಕಾರ್ಮಿಕರು, ನೌಕರರು, ವ್ಯಾಪಾರಿಗಳು ಎಲ್ಲರೂ ಅವಲಂಬಿತರಾಗಿದ್ದರು.
ಭಾನುವಾರ ಶಾಲಾ-ಕಾಲೇಜು ವಿದ್ಯಾರ್ಥಿಗಳು ನೆಲ್ಯಾಡಿ, ಕೊಕ್ಕಡ, ಕಡಬ, ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ ಭಾಗಕ್ಕೆ ತರಬೇತಿ, ಕೋಚಿಂಗ್, ಪರೀಕ್ಷೆ, ಹಾಗೂ ಸ್ಪರ್ಧಾತ್ಮಕ ತರಗತಿಗಳಿಗೆ ಹೋಗುತ್ತಾರೆ. ಅದಕ್ಕಾಗಿ ಈ ಬಸ್ಸನ್ನೇ ನಂಬಿದ್ದರು. ಬಸ್ ನಿಲ್ಲಿಸಿದ ಬಗ್ಗೆ ಜನ ಧರ್ಮಸ್ಥಳ ಡಿಪೋ ಮ್ಯಾನೇಜರ್‌ರನ್ನು ವಿಚಾರಿಸಿದಾಗ ಭಾನುವಾರ ಧರ್ಮಸ್ಥಳಕ್ಕರ ಹೆಚ್ಚಿನ ಯಾತ್ರಾರ್ಥಿಗಳು ಬರುವುದರಿಂದ ಬಸ್ ಮಾರ್ಗ ತಾತ್ಕಾಲಿಕವಾಗಿ ಬದಲಾಯಿಸಿದ್ದೇವೆ ಎಂಬ ಉತ್ತರ ನೀಡಿದ್ದಾರೆಂದು ಗೊತ್ತಾಗಿದೆ. ಪ್ರಯಾಣಿಕರು ದೂರಿದ್ದಾರೆ. ಕೆಎಸ್ ಆರ್ ಟಿ ಸಿ ಬಸ್ ಜನರ ತೆರಿಗೆ ಹಣದಿಂದ ಓಡುತ್ತದೆ. ಯಾತ್ರಿಕರನ್ನು ಮಾತ್ರ ಗಮನಿಸಿದರೆ ಇತರ ಪ್ರಯಾಣಿಕರ ಗತಿ ಏನು ಎಂದು ಜನ ಕೇಳುತ್ತಿದ್ದಾರೆ.
ಕಡಬ ತಾಲೂಕು ಕೇಂದ್ರವಾಗಿರುವುದರಿಂದ ಈ ಭಾಗದ ಜನರ ದಿನನಿತ್ಯದ ಕಾರ್ಯಗಳು ಕಡಬದಲ್ಲೇ ನಡೆಯುತ್ತವೆ. ಭಾನುವಾರ ಬಸ್ ಸಂಚಾರ ನಿಂತ ಕಾರಣ, ಜನರ ಕಾರ್ಯನಿಮಿತ್ತ ಕಡಬ ತಲುಪಲು ಕಷ್ಟ ಪಡುತ್ತಿದ್ದಾರೆ.
ಖಾಸಗಿ ವಾಹನಗಳ ಅಭಾವದಿಂದ ಕೆಲವರು ಲಿಫ್ಟ್ ಕೇಳಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು 7–8 ಕಿಮೀ ದೂರ ನಡೆದು ಬಸ್ ಹಿಡಿಯಬೇಕಾಗುತ್ತಿದೆ. ಕೊಕ್ಕಡ–ನೆಲ್ಯಾಡಿ–ಕಡಬ ಮಾರ್ಗದ ಬಸ್ ಸೇವೆ ಅನೇಕ ವರ್ಷಗಳ ಬೇಡಿಕೆಯಾಗಿದ್ದರಿಂದ ಹೊಸ ಬಸ್ ಆರಂಭಗೊಂಡಾಗ ಜನ ಸಂತಸಗೊಂಡಿದ್ದರು. ಈಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಸ್ ಸಂಚಾರ ನಿಂತಿದೆ. ಇದನ್ನು ಮತ್ತೆ ಆರಂಭಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.






