

ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಹಾಗೂ ಮಾರಕಾಯುದ್ದ ಸಹಿತ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ನ.8ರಂದು ಮಧ್ಯಾಹ್ನ ನಡೆದಿದೆ.
ಮಾಹಿತಿ ಪ್ರಕಾರ, ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಆಟೋ ರಿಕ್ಷಾ ಒಂದರಲ್ಲಿ ಗಾಂಜಾ ಸಾಗಾಟವಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ, ಪುತ್ತೂರು ನಗರ ಠಾಣೆಯ ಉಪನಿರೀಕ್ಷಕ ಜನಾರ್ಧನ ಕೆ.ಎಂ ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಆಟೋವನ್ನು ತಡೆದು ಪರಿಶೀಲನೆ ನಡೆಸಿದರು.
ಪರಿಶೀಲನೆಯ ವೇಳೆ, ಸುಮಾರು ಒಂದು ಕೆಜಿಗೂ ಹೆಚ್ಚು ಪ್ರಮಾಣದ ನಿಷೇಧಿತ ಮಾದಕ ವಸ್ತು ‘ಗಾಂಜಾ’ ಮತ್ತು ಸುಮಾರು 25 ಇಂಚು ಉದ್ದದ ಮಾರಕಾಯುಧ ಪತ್ತೆಯಾಯಿತು. ವಿಚಾರಣೆಯಲ್ಲಿ ಆಟೋ ಚಾಲಕನು ಕಡಬ ತಾಲೂಕಿನ ಸವಣೂರು ನಿವಾಸಿ ಪ್ರಸಾದ್ ಇ. (35) ಎಂದು ಗುರುತಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 106/2025, NDPS ಕಾಯ್ದೆಯ ಕಲಂ 8(C), 20(ii)(c) ಹಾಗೂ Indian Arms Act ಕಲಂ 25(1B)(b) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದ್ದು, ಬಳಿಕ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.






