ನವತಿ ಸಂಭ್ರಮಾಚರಣೆಯಲ್ಲಿರುವ ಕೊಕ್ಕಡದ “ಗೌಡ ಡಾಕ್ಟರ್”

ಶೇರ್ ಮಾಡಿ

ಅರ್ಧ ಶತಮಾನದ ವೈದ್ಯಕೀಯ ಸೇವೆ – ಗ್ರಾಮೀಣ ಜನರ ಪಾಲಿನ ಆಪತ್ಬಾಂಧವ: ಆರ್ಯಭಟ ಪ್ರಶಸ್ತಿ ಪುರಸ್ಕೃತ ಡಾ.ಮೋಹನ್ ದಾಸ್ ಗೌಡ

ಗ್ರಾಮೀಣ ಭಾರತದ ಆರೋಗ್ಯ ಸೇವೆಯ ಇತಿಹಾಸದಲ್ಲಿ ತಮ್ಮದೇ ಆದ ಅಚ್ಚಳಿಯ ಗುರುತು ಮೂಡಿಸಿರುವ, ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ‘ಗೌಡ ಡಾಕ್ಟರ್’ ಎಂದೇ ಮನೆಮಾತಾಗಿರುವ ಆರ್ಯಭಟ ಪ್ರಶಸ್ತಿ ವಿಜೇತ ಡಾ.ಮೋಹನ್ ದಾಸ್ ಗೌಡ ಅವರು ತಮ್ಮ 90ನೇ ನವತಿ ಸಂಭ್ರಮಾಚರಣೆಯಲ್ಲೂ ವೈದ್ಯಕೀಯ ಸೇವೆಯಿಂದ ಹಿಂದೆ ಸರಿಯದೆ ಜನರ ಪಾಲಿಗೆ ನಿಜಾರ್ಥದ ಆಪತ್ಬಾಂಧವರಾಗಿ ನಿಂತಿದ್ದಾರೆ. ವಯಸ್ಸು ದೇಹವನ್ನು ಕುಗ್ಗಿಸಬಹುದೇ ಹೊರತು ಸೇವಾ ಮನಸ್ಸನ್ನು ಕುಗ್ಗಿಸಲಾರದು ಎಂಬುದಕ್ಕೆ ಡಾ.ಗೌಡರು ಜೀವಂತ ಉದಾಹರಣೆ.

ಬಂಟ್ವಾಳ ತಾಲೂಕಿನ ಮೂಡ ಗ್ರಾಮದ ಭಂಡಾರಿಬೆಟ್ಟು ಪ್ರದೇಶದಲ್ಲಿ ಜನಿಸಿದ ಡಾ.ಮೋಹನ್ ದಾಸ್ ಗೌಡರು ಬಾಲ್ಯದಿಂದಲೇ ಸರಳ ಬದುಕು, ಶಿಸ್ತು ಹಾಗೂ ಶ್ರಮವನ್ನು ತಮ್ಮ ಜೀವನದ ಮೌಲ್ಯಗಳಾಗಿ ಅಳವಡಿಸಿಕೊಂಡವರು. ಶಿಕ್ಷಣದ ಹಂತದಲ್ಲೇ ಆರೋಗ್ಯ ಸೇವೆಯತ್ತ ಒಲವು ಬೆಳೆಸಿಕೊಂಡ ಇವರು ಹೋಮಿಯೋಪತಿ, ಅಲೋಪತಿ, ಆಯುರ್ವೇದ ಪದ್ಧತಿಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದು ಮಾತ್ರವಲ್ಲದೆ, ಔಷಧ ವಿತರಕ ಪದವಿಯನ್ನೂ ಪಡೆದು ಬಹುಮುಖ ವೈದ್ಯರಾಗಿ ರೂಪುಗೊಂಡರು.

ಸುಮಾರು 45 ವರ್ಷಗಳ ಹಿಂದೆ ಕೊಕ್ಕಡ ಪೇಟೆಯಲ್ಲಿ ತಮ್ಮ ಮಡದಿ ಪೂರ್ಣಿಮಾ ಅವರ ಹೆಸರಿನಲ್ಲಿ ಚಿಕ್ಕ ಕ್ಲಿನಿಕ್ ಆರಂಭಿಸಿದಾಗ, ಅದು ಮುಂದೊಂದು ದಿನ ಇಡೀ ಪ್ರದೇಶದ ಆರೋಗ್ಯ ಸೇವೆಯ ಕೇಂದ್ರಬಿಂದುವಾಗುತ್ತದೆ ಎಂಬುದು ಅಂದಿನವರಿಗೆ ಊಹೆಗೂ ಮೀರಿದ ಸಂಗತಿ. ರಸ್ತೆ ಸೌಲಭ್ಯಗಳು ಇಲ್ಲದ, ವಾಹನಗಳ ಪ್ರವೇಶ ವಿರಳವಾಗಿದ್ದ ಆ ದಿನಗಳಲ್ಲಿ, ವೈದ್ಯರನ್ನು ಕಾಣುವುದೇ ದೊಡ್ಡ ಸಂಗತಿಯಾಗಿದ್ದ ಕಾಲಘಟ್ಟದಲ್ಲಿ, ಡಾ.ಗೌಡರು ಕಾಲ್ನಡಿಗೆಯಲ್ಲೇ ಹಳ್ಳಿಹಳ್ಳಿಗೆ ತೆರಳಿ ಚಿಕಿತ್ಸೆ ನೀಡಿದ ಸೇವೆ ಇಂದಿಗೂ ಜನಮನದಲ್ಲಿ ಕೃತಜ್ಞತೆಯಾಗಿ ಉಳಿದಿದೆ.

ಪಟ್ಟೂರು, ಪಟ್ರಮೆ, ನಿಡ್ಲೆ, ನೆಲ್ಯಾಡಿ, ಅರಸಿನಮಕ್ಕಿ, ಶಿಶಿಲ, ಶಿಬಾಜೆ, ರೆಖ್ಯ, ಕೌಕ್ರಾಡಿ ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳ ಜನರು ತುರ್ತು ಅನಾರೋಗ್ಯ ಯಾವುದೇ ಸಂದರ್ಭದಲ್ಲೂ ‘ಗೌಡ ಡಾಕ್ಟರ್’ ಅವರನ್ನೇ ಮೊದಲು ನೆನಪಿಸಿಕೊಳ್ಳುತ್ತಿದ್ದ ದಿನಗಳು ಅನೇಕ. ರಾತ್ರಿ, ಮಳೆ, ಕಾಡುಮಾರ್ಗ, ದಟ್ಟ ಕತ್ತಲೆ ಯಾವುದನ್ನೂ ಲೆಕ್ಕಿಸದೆ ರೋಗಿಯ ನೋವಿಗೆ ಸ್ಪಂದಿಸುವ ಮಾನವೀಯ ವೈದ್ಯರಾಗಿ ಅವರು ತಮ್ಮ ಬದುಕನ್ನು ರೂಪಿಸಿಕೊಂಡರು.

90ರ ಹರೆಯದಲ್ಲೂ ಸೇವೆಯ ಉತ್ಸವ:
ವಯಸ್ಸು 90 ದಾಟಿದರೂ ಸೇವೆಯ ಉತ್ಸಾಹ ಮಾತ್ರ ಕ್ಷೀಣಿಸಿಲ್ಲ. 2010ರಲ್ಲಿ ಕೊಕ್ಕಡದ ಜೋಡುಮಾರ್ಗದಲ್ಲಿ ಹಿರಿಯ ಪುತ್ರನ ಪತ್ನಿ ಡಾ.ತಾರಾ ಹಾಗೂ ಕುಟುಂಬದವರ ಸಹಕಾರದೊಂದಿಗೆ ‘ಪಂಚಮಿ ಹಿತಾಯುಧಾಮ’ ಎಂಬ ಆಸ್ಪತ್ರೆಯನ್ನು ಆರಂಭಿಸಿ, ‘ವೈದ್ಯೋ ನಾರಾಯಣ ಹರಿ’ ಎಂಬ ನುಡಿಗೆ ಅಕ್ಷರಶಃ ಅರ್ಥ ತುಂಬಿದರು. ಇಂದು ಕೂಡ ಸೊಸೆಯೊಂದಿಗೆ ಸೇರಿ ರೋಗಿಗಳನ್ನು ಪರಿಶೀಲಿಸಿ, ಸಲಹೆ ನೀಡಿ, ಔಷಧೋಪಚಾರ ಮಾಡುವ ಮೂಲಕ ವೈದ್ಯ ವೃತ್ತಿಯ ಪವಿತ್ರತೆಯನ್ನು ಕಾಪಾಡುತ್ತಿದ್ದಾರೆ.

ಅಗತ್ಯ ಬಿದ್ದಾಗ ಇಂದಿಗೂ ರೋಗಿಗಳ ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಿರುವುದು, ಇಂದಿನ ತಂತ್ರಜ್ಞಾನ ಆಧಾರಿತ ವೈದ್ಯಕೀಯ ಯುಗದಲ್ಲಿ ಅಪರೂಪದ ಸಂಗತಿ. ಈ ನಡವಳಿಕೆ ಇಂದಿನ ಯುವ ವೈದ್ಯರಿಗೆ ಮಾತ್ರವಲ್ಲ, ಸಮಾಜಕ್ಕೂ ಒಂದು ಪಾಠವಾಗಿದೆ ವೈದ್ಯ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಸೇವೆ

ಆರೋಗ್ಯವೇ ಅವರ ಮಹಾ ಸಾಧನೆ:
ಡಾ. ಮೋಹನ್ ದಾಸ್ ಗೌಡರ ಆರೋಗ್ಯವೇ ಅವರ ಜೀವನ ಶೈಲಿಯ ಪ್ರತಿಫಲ. 90ರ ಹರೆಯದಲ್ಲೂ ಕೋಲಿಲ್ಲದೆ ನಡೆಯುವ, ಕನ್ನಡಕವಿಲ್ಲದೆ ನೋಡುವ, ಕಿವಿ ಯಂತ್ರವಿಲ್ಲದೆ ಕೇಳುವ, ಸ್ಪಷ್ಟವಾಗಿ ಮಾತನಾಡುವ ಶಕ್ತಿ, ಅದ್ಭುತ ನೆನಪಿನ ಸಾಮರ್ಥ್ಯ ಇವೆಲ್ಲವೂ ಅವರನ್ನು ವಿಭಿನ್ನರನ್ನಾಗಿಸಿದೆ. ಶರೀರ ಸದೃಢವಾಗಿದ್ದು, ಮಾನಸಿಕವಾಗಿ ಸದಾ ಚುರುಕಾಗಿರುವ ಅವರು, ಇಂದಿನ ಯುವಕರನ್ನೇ ನಾಚಿಸುವಂತಿದೆ.

ದೇವರ ಮೇಲೆ ಅಪಾರ ಭಕ್ತಿ ಹೊಂದಿರುವ ಅವರು, ಧರ್ಮ, ಸಂಸ್ಕೃತಿ ಮತ್ತು ಮಾನವೀಯತೆಯನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿ ಮಾಡಿಕೊಂಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗಡೆ ಅವರ ಪರಮಾಪ್ತರಾಗಿರುವ ಡಾ.ಗೌಡರು, ಧರ್ಮಸ್ಥಳದ ಸೇವಾ ಪರಂಪರೆಯೊಂದಿಗೂ ಆಳವಾದ ನಂಟು ಹೊಂದಿದ್ದಾರೆ.

ಸಮಾಜಮುಖಿ ಸೇವೆಯಲ್ಲೂ ಮುಂಚೂಣಿ:
ವೈದ್ಯಕೀಯ ಸೇವೆಯ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಡಾ.ಗೌಡರ ಮತ್ತೊಂದು ಮಹತ್ವದ ಆಯಾಮ. ಶ್ರೀ ಕ್ಷೇತ್ರ ಧರ್ಮಸ್ಥಳದ ಮಧ್ಯವರ್ಜನ ಶಿಬಿರಗಳಲ್ಲಿ ವೈದ್ಯರಾಗಿ ಇಂದಿಗೂ ಸೇವೆ ಸಲ್ಲಿಸುತ್ತಿರುವುದು, ಸಾವಿರಾರು ಬಡವರ ಪಾಲಿಗೆ ವರದಾನವಾಗಿದೆ. ಅಲ್ಲದೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರಾಗಿ, ಹಲವು ಶಿಕ್ಷಣ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಉಳಿವಿಗೆ ಶ್ರಮಿಸುತ್ತಿದ್ದಾರೆ. ವಿವಿಧ ಸಂಘ–ಸಂಸ್ಥೆಗಳ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ, ಸಮಾಜದ ಒಟ್ಟಾರೆ ಬೆಳವಣಿಗೆಗೆ ತಮ್ಮ ಕೊಡುಗೆಯನ್ನು ನಿರಂತರವಾಗಿ ನೀಡುತ್ತಿದ್ದಾರೆ.

ಗೌರವಗಳು ಮತ್ತು ಪ್ರಶಸ್ತಿಗಳು:
ಗ್ರಾಮೀಣ ಆರೋಗ್ಯ ಸೇವೆಗೆ ನೀಡಿದ ಅಪಾರ ಕೊಡುಗೆಗಾಗಿ ಡಾ. ಮೋಹನ್ ದಾಸ್ ಗೌಡರು ಹಲವಾರು ಗೌರವಗಳು ಮತ್ತು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಅದರಲ್ಲೂ ಆರ್ಯಭಟ ಪ್ರಶಸ್ತಿ ಅವರಿಗೆ ದೊರೆತ ಮಹತ್ವದ ಗೌರವವಾಗಿದ್ದು, ಅವರ ಸೇವೆಯ ಮೌಲ್ಯವನ್ನು ಸಮಾಜ ಅಧಿಕೃತವಾಗಿ ಒಪ್ಪಿಕೊಂಡ ಸಂಕೇತವಾಗಿದೆ. ಆದರೆ ಪ್ರಶಸ್ತಿಗಳಿಗಿಂತಲೂ ಜನರ ಪ್ರೀತಿ, ನಂಬಿಕೆ ಮತ್ತು ಆಶೀರ್ವಾದವೇ ಅವರ ಜೀವನದ ದೊಡ್ಡ ಸಾಧನೆ ಎಂದು ಅವರು ಸರಳವಾಗಿ ಹೇಳುತ್ತಾರೆ.

ನವತಿ ಸಂಭ್ರಮಾಚರಣೆ ಎಂದರೆ ಕೇವಲ ವಯಸ್ಸಿನ ಮೈಲಿಗಲ್ಲಲ್ಲ; ಅದು ಸೇವೆ, ತ್ಯಾಗ ಮತ್ತು ಮಾನವೀಯತೆಯಿಂದ ತುಂಬಿದ ಬದುಕಿನ ಸಾರ್ಥಕತೆ. ಡಾ.ಮೋಹನ್ ದಾಸ್ ಗೌಡರ ಬದುಕು ಅದಕ್ಕೆ ಜೀವಂತ ಸಾಕ್ಷಿ. ಇಂದಿನ ಯಾಂತ್ರಿಕ ಬದುಕಿನ ನಡುವೆ, ಮೌಲ್ಯಗಳು ಕುಸಿಯುತ್ತಿರುವ ಕಾಲದಲ್ಲಿ, ಅವರ ಜೀವನ ಶೈಲಿ ಸಮಾಜಕ್ಕೆ ದಿಕ್ಕು ತೋರಿಸುವ ದೀಪವಾಗಿದೆ.
-ಅಬ್ರಹಾಂ ವರ್ಗೀಸ್, ಸ್ಥಾಪಕ ಕಾರ್ಯದರ್ಶಿಗಳು ಸಂತ ಜಾರ್ಜ್ ವಿದ್ಯಾಸಂಸ್ಥೆ ನೆಲ್ಯಾಡಿ

ಗ್ರಾಮೀಣ ಜನರ ನೋವಿಗೆ ಸ್ಪಂದಿಸಿ, ಅವರ ಕಣ್ಣೀರನ್ನು ಒರೆಸಿ, ಆರೋಗ್ಯವನ್ನು ಮರಳಿ ನೀಡಿದ ಈ ಮಹಾನ್ ವೈದ್ಯ ಆರೋಗ್ಯವೇ ಅವರ ಮಹಾ ಸಾಧನೆ. ‘ಗೌಡ ಡಾಕ್ಟರ್’ ಎಂಬ ಹೆಸರು ಮುಂದಿನ ಪೀಳಿಗೆಗೂ ಸೇವೆ, ಸರಳತೆ ಮತ್ತು ಮಾನವೀಯತೆಯ ಪ್ರತೀಕವಾಗಿ ಉಳಿಯುವುದರಲ್ಲಿ ಸಂಶಯವೇ ಇಲ್ಲ.
-ಕುಶಾಲಪ್ಪ ಗೌಡ, ದೊಡ್ಡಮನೆ ಪಂಜ

  •  

Leave a Reply

error: Content is protected !!