


ನೆಲ್ಯಾಡಿ: ಸಮಾಜದಲ್ಲಿ ಯುವಶಕ್ತಿಯನ್ನು ಸಂಘಟಿತವಾಗಿ ನಾಯಕತ್ವ, ಸಮಾಜಸೇವೆ ಹಾಗೂ ರಾಷ್ಟ್ರ ನಿರ್ಮಾಣದತ್ತ ಪ್ರೇರೇಪಿಸುವ ಮಹತ್ವದ ಉದ್ದೇಶದಿಂದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲಿಜನ್ ವತಿಯಿಂದ ಯೂತ್ ವಿಂಗ್ ಅನ್ನು ಸ್ಥಾಪಿಸಲಾಗಿದೆ ಎಂದು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷ ಎಂ.ಆರ್.ಜಯೇಷಾ ಹೇಳಿದರು.
ಅವರು ಬೆಥನಿ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ (ಐಟಿಐ), ನೆಲ್ಯಾಡಿಯ ಬೆಥನಿ ಜೂಬಿಲಿ ಹಾಲ್ನಲ್ಲಿ ನಡೆದ ಯೂತ್ ವಿಂಗ್ ಉದ್ಘಾಟನಾ ಸಮಾರಂಭದ ಮುಖ್ಯಅತಿಥಿ ಸ್ಥಾನದಿಂದ ಮಾತನಾಡಿದರು.
ನೆಲ್ಯಾಡಿ ಬೆಥನಿ ವಿದ್ಯಾ ಸಂಸ್ಥೆಗಳ ಸಂಚಾಲಕ ಫಾ.ಡಾ.ವರ್ಗೀಸ್ ಕೈಪನಡ್ಕ ಅವರು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲಿಜನ್ ಯೂತ್ ವಿಂಗ್ ಅನ್ನು ಉದ್ಘಾಟಿಸಿ ಮಾತನಾಡಿ ಇಂದಿನ ಯುವಜನತೆ ಸಮಾಜದ ಭವಿಷ್ಯವನ್ನು ರೂಪಿಸುವ ಶಕ್ತಿಯಾಗಿದೆ. ಯುವಕರನ್ನು ಸರಿಯಾದ ಮಾರ್ಗದರ್ಶನ, ಮೌಲ್ಯಾಧಾರಿತ ನಾಯಕತ್ವ ಮತ್ತು ಸಮಾಜಮುಖಿ ಚಿಂತನೆಯೊಂದಿಗೆ ಸಂಘಟಿಸುವ ಕಾರ್ಯ ಅತ್ಯಂತ ಅಗತ್ಯವಾಗಿದೆ. ಈ ದಿಸೆಯಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಯೂತ್ ವಿಂಗ್ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲಿಜನ್ ಅಧ್ಯಕ್ಷ ಪ್ರಕಾಶ್ ಕೆ.ವೈ. ವಹಿಸಿದ್ದರು.ರಾಷ್ಟ್ರೀಯ ಯೂತ್ ವಿಂಗ್ ನಿರ್ದೇಶಕರಾದ ಹುಸೇನ್ ಹೈಕಾಡಿ ಅವರು ಯೂತ್ ವಿಂಗ್ ಅಧ್ಯಕ್ಷ ಲಿಖಿತ್ ಹಾಗೂ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಸಿದ್ದಗಂಗಯ್ಯ, ನಿರ್ದೇಶಕ ಫಾ.ಸಾಮುವೆಲ್ ಜಾರ್ಜ್, ಬೆಥನಿ ಐಟಿಐ ಪ್ರಾಂಶುಪಾಲ ಸಜಿ ಕೆ.ತೋಮಸ್, ವಿಷನ್ 360 ರಾಷ್ಟ್ರೀಯ ಸಂಯೋಜಕ ಡಾ.ಸದಾನಂದ ಕುಂದರ್, ನಿಕಟ ಪೂರ್ವ ಅಧ್ಯಕ್ಷರಾದ ಶೀನಪ್ಪ ಎಸ್., ಕಾರ್ಯದರ್ಶಿ ಉಲಹನ್ನಾನ್ ಪಿ.ಎಂ., ಕೋಶಾಧಿಕಾರಿ ಮೋಹನ್ ಕುಮಾರ್ ಡಿ. ಉಪಸ್ಥಿತರಿದ್ದು ನೂತನ ಯೂತ್ ವಿಂಗ್ಗೆ ಶುಭಾಶಯ ಕೋರಿದರು.
ತರಬೇತಿ ಅಧಿಕಾರಿ ಜೋನ್ ಪಿಎಸ್, ಕಿರಿಯ ತರಬೇತಿ ಅಧಿಕಾರಿ ಸುಬ್ರಾಯ ನಾಯಕ್ ಹಾಗೂ ಸೀನಿಯರ್ ವಿಶ್ವನಾಥ ಶೆಟ್ಟಿ ವಿವಿಧ ಗಣ್ಯರನ್ನು ಸಭೆಗೆ ಪರಿಚಯಿಸಿದರು. ವಿಷನ್ 360 ರಾಷ್ಟ್ರೀಯ ಸಂಯೋಜಕ ಡಾ. ಸದಾನಂದ ಕುಂದರ್ ಅವರು ಮ್ಯಾಜಿಕ್ ಮೂಲಕ ಗುಲಾಬಿ ಹೂಗಳನ್ನು ನೀಡಿ ಅತಿಥಿಗಳನ್ನು ವಿನೂತನ ರೀತಿಯಲ್ಲಿ ಸ್ವಾಗತಿಸಿದರು. ಸೀನಿಯರ್ ವರ್ಗೀಸ್ ಎನ್.ಟಿ. ಅವರು ವಾಣಿ ವಾಚಿಸಿದರು. ಜಾರ್ಜ್ ಕೆ. ತೋಮಸ್ ವಂದಿಸಿದರು. ಕಾರ್ಯಕ್ರಮದಲ್ಲಿ ಯೂತ್ ವಿಂಗ್ ಪದಾಧಿಕಾರಿಗಳು, ಸದಸ್ಯರು ಹಾಗೂ ಆಹ್ವಾನಿತ ಅತಿಥಿಗಳು ಉಪಸ್ಥಿತರಿದ್ದರು.






