


ಬೆಳ್ತಂಗಡಿ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೆಯು ಬ್ರಹ್ಮಶ್ರೀ ವೇದಮೂರ್ತಿ ಬಾಲಕೃಷ್ಣ ಪಾಂಗಣ್ಣಾಯ ಹಾಗೂ ವೇದಮೂರ್ತಿ ವ್ಯಾಸ ಪಾಂಗಣ್ಣಾಯ ತಂತ್ರಿಗಳ ಮಾರ್ಗದರ್ಶನದಲ್ಲಿ, ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ರಾಘವೇಂದ್ರ ಅಸ್ರಣ್ಣ ಅವರ ನೇತೃತ್ವದಲ್ಲಿ ಶನಿವಾರ ಸಂಪ್ರದಾಯಬದ್ಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರಂಭವಾಯಿತು.
ಜಾತ್ರೆಯ ಅಂಗವಾಗಿ ಹೊರೆಕಾಣಿಕೆ ಸಮರ್ಪಣೆ, ಶ್ರೀದೇವರಿಗೆ ನವಕ ಪ್ರಧಾನ ಕಲಶಾಭಿಷೇಕ, ಮಹಾಪೂಜೆ ನೆರವೇರಿತು. ಮಧ್ಯಾಹ್ನ ಧ್ವಜಾರೋಹಣ ಕಾರ್ಯಕ್ರಮ ಜರುಗಿದ್ದು, ನಿತ್ಯಬಲಿ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆಯಲ್ಲಿ ಪೂಜೆ, ಮಹಾಪೂಜೆ, ನಿತ್ಯಬಲಿ ಹಾಗೂ ದೀಪದ ಬಲಿ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಹಸಿರು ಹೊರೆಕಾಣಿಕೆಯನ್ನು ಗೇರುಕಟ್ಟೆಯಿಂದ ನಾಳ ದೇವಳದವರೆಗೆ ಭವ್ಯ ಮೆರವಣಿಗೆಯ ಮೂಲಕ ತರಲಾಯಿತು. ಭಕ್ತಾಧಿಗಳ ಉತ್ಸಾಹಭರಿತ ಭಾಗವಹಿಸುವಿಕೆಯಿಂದ ಜಾತ್ರೆ ಮತ್ತಷ್ಟು ವೈಭವ ಪಡೆದಿತು.
ಕಾರ್ಯಕ್ರಮದಲ್ಲಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಸದಸ್ಯರಾದ ಹೇಮಂತ್ ಕುಮಾರ್, ಶರತ್ ಕುಮಾರ್ ಶೆಟ್ಟಿ, ಹರೀಶ್ ಗೌಡ, ಅರುಣ್ ಕುಮಾರ್ ಶೆಟ್ಟಿ, ನೀನಾ ಕುಮಾರ್, ರೀತಾ ಚಂದ್ರಶೇಖರ್, ಮೋಹಿನಿ ಗೌಡ ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ವಸಂತ ಮಜಲು, ಭುವನೇಶ್ ಗೇರುಕಟ್ಟೆ, ಮಾಜಿ ಸದಸ್ಯರುಗಳು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಹಾಗೂ ಪದಾಧಿಕಾರಿಗಳು, ಭಜನಾ ಮಂಡಳಿ ಅಧ್ಯಕ್ಷ ಗಣೇಶ್ ಗೌಡ ಮತ್ತು ಪದಾಧಿಕಾರಿಗಳು, ಸದಸ್ಯರು, ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷೆ ಮಮತಾ ವಿ. ಆಳ್ವ ಹಾಗೂ ಪದಾಧಿಕಾರಿಗಳು, ದೇವಳದ ಪ್ರಬಂಧಕ ಗಿರೀಶ್ ಶೆಟ್ಟಿ, ದೇವಳದ ಸಿಬ್ಬಂದಿಗಳು, ಪರಿಚಾರಕರು, ವಿಲಯದವರು, ಕಳಿಯ, ನ್ಯಾಯತರ್ಪು ಹಾಗೂ ಓಡಿಲ್ನಾಳ ಗ್ರಾಮದ ಭಕ್ತಾಧಿಗಳು ಭಾಗವಹಿಸಿದ್ದರು.





