


ಸುಬ್ರಹ್ಮಣ್ಯ: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನಾ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕಳೆದ ನಾಲ್ಕು ದಿನಗಳಿಂದ ಸರಣಿ ರಜೆಗಳ ಹಿನ್ನೆಲೆಯಲ್ಲಿ ಭಕ್ತಾದಿಗಳ ಮಹಾಪೂರವೇ ಹರಿದು ಬಂದಿದೆ. ಹಗಲು-ರಾತ್ರಿ ಎನ್ನದೇ ಎರಡು ಲಕ್ಷಕ್ಕೂ ಅಧಿಕ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿರುವುದು ಕಂಡುಬಂದಿದೆ. ಇದರೊಂದಿಗೆ ನಾಲ್ಕು ದಿನಗಳ ಅವಧಿಯಲ್ಲಿ ಶ್ರೀ ಕ್ಷೇತ್ರದ ಒಟ್ಟು ಆದಾಯವು ನಾಲ್ಕು ಕೋಟಿಗೂ ಮಿಕ್ಕುವ ನಿರೀಕ್ಷೆಯಿದೆ.

ಹುಂಡಿ, ಸೇವೆ, ಅನ್ನದಾನದಿಂದ ದಾಖಲೆ ಆದಾಯ:
ಭಕ್ತರಿಂದ ದೊರೆತ ಆದಾಯದಲ್ಲಿ ಹುಂಡಿ ಹಣ, ವಿವಿಧ ಸೇವೆಗಳ ರಸೀದಿಗಳಿಂದ ಬಂದ ಮೊತ್ತ, ಅನ್ನದಾನ ದೇಣಿಗೆಯಿಂದ ಸಂಗ್ರಹವಾದ ಹಣ, ವಸತಿ ಛತ್ರಗಳ ಬಾಡಿಗೆ, ಹರಿಕೆ ಸಾಮಗ್ರಿಗಳಾದ ಬೆಳ್ಳಿ ಹಾಗೂ ಚಿನ್ನದ ದೇಣಿಗೆಗಳು ಸೇರಿದ್ದು, ಒಟ್ಟಾರೆ ಆದಾಯವು ಗಮನಾರ್ಹ ಪ್ರಮಾಣದಲ್ಲಿದೆ ಎಂದು ಕ್ಷೇತ್ರದ ಮೂಲಗಳು ತಿಳಿಸಿವೆ.
ಅನ್ನಪ್ರಸಾದಕ್ಕೆ ವಿಶೇಷ ವ್ಯವಸ್ಥೆ:
ಭಕ್ತರ ಸಂಖ್ಯೆಯ ಹೆಚ್ಚಳದ ಹಿನ್ನೆಲೆಯಲ್ಲಿ ಮಧ್ಯಾಹ್ನದ ಅನ್ನಪ್ರಸಾದ ವ್ಯವಸ್ಥೆಯನ್ನು ಮುಖ್ಯ ಅನ್ನಪ್ರಸಾದ ಭೋಜನ ಶಾಲೆಯ ಜೊತೆಗೆ ಆದಿ ಸುಬ್ರಹ್ಮಣ್ಯದ ಭೋಜನ ಶಾಲೆಯಲ್ಲಿಯೂ ಬಫೆ ವ್ಯವಸ್ಥೆಯೊಂದಿಗೆ ಕಲ್ಪಿಸಲಾಗಿತ್ತು. ಸಾವಿರಾರು ಭಕ್ತರು ಶಿಸ್ತುಬದ್ಧವಾಗಿ ಅನ್ನಪ್ರಸಾದ ಸ್ವೀಕರಿಸಿದರು.
ವಾಹನ ದಟ್ಟಣೆ – ಸುಗಮ ಸಂಚಾರಕ್ಕೆ ಕ್ರಮ:
ಶ್ರೀ ಕ್ಷೇತ್ರದ ಸುತ್ತಮುತ್ತ ಹಾಗೂ ಪಾರ್ಕಿಂಗ್ ಪ್ರದೇಶಗಳು ಸಂಪೂರ್ಣವಾಗಿ ವಾಹನಗಳಿಂದ ಭರ್ತಿಯಾಗಿದ್ದವು. ರಥಬೀದಿ ಮತ್ತು ಪಾರ್ಕಿಂಗ್ ವಲಯಗಳಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ನಿಯೋಜನೆಗೊಂಡು ವಾಹನ ನಿಯಂತ್ರಣ ಹಾಗೂ ಸುಗಮ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದರು.
ಅಧಿಕಾರಿಗಳ ನೇರ ಮೇಲ್ವಿಚಾರಣೆ:
ಶ್ರೀ ದೇವಳದ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಒಳಾಂಗಣದಲ್ಲಿ ಭಕ್ತರ ಸುಗಮ ದರ್ಶನಕ್ಕೆ ವ್ಯವಸ್ಥೆ ಮಾಡುತ್ತಾ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು. ಸಹಾಯಕ ಕಾರ್ಯನಿರ್ವಹಣಾ ಅಧಿಕಾರಿ ಯೇಸುರಾಜ್ ಅವರು ಪ್ರವೇಶ ದ್ವಾರ ಹಾಗೂ ಹೊರಾಂಗಣದಲ್ಲಿ ಸಿಬ್ಬಂದಿ ದಳದೊಂದಿಗೆ ಕಾರ್ಯನಿರ್ವಹಿಸಿ ಭಕ್ತರ ನಿಗದಿತ ಸಾಲು ವ್ಯವಸ್ಥೆ ಮತ್ತು ದರ್ಶನ ವ್ಯವಸ್ಥೆಯನ್ನು ಸುಗಮಗೊಳಿಸಿದರು.





