ಕೊಣಾಲು: ಜಾನುವಾರು ಓಡಿಸುವ ವೇಳೆ ಬಿದ್ದು ಮಹಿಳೆ ಮೃತ್ಯು

ಶೇರ್ ಮಾಡಿ
ಕೊಣಾಲು: ಜಾನುವಾರು ಓಡಿಸುವ ವೇಳೆ ಬಿದ್ದು ಮಹಿಳೆ ಮೃತ್ಯು

ನೆಲ್ಯಾಡಿ: ತೋಟಕ್ಕೆ ಮೇಯಲು ಬಂದ ಜಾನುವಾರುಗಳನ್ನು ಓಡಿಸಲು ಹೋದ ವೇಳೆ ಆಕಸ್ಮಿಕವಾಗಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ನಡೆದಿದೆ.

ಕೊಣಾಲು ಗ್ರಾಮದ ಪಾತೃಮಾಡಿ ನಿವಾಸಿ ಲೀಲಾವತಿ ಶೆಟ್ಟಿ (64) ಮೃತಪಟ್ಟವರು. ಮಾ.11ರಂದು ಸಂಜೆ ತಮ್ಮ ತೋಟಕ್ಕೆ ಮೇಯಲು ಬಂದ ಜಾನುವಾರುಗಳನ್ನು ಓಡಿಸಲು ಹೋದ ವೇಳೆ ಅವರು ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಲೀಲಾವತಿ ಅವರ ಪುತ್ರ ಹರೀಶ್ ಲಾರಿ ಚಾಲಕರಾಗಿದ್ದು, ಮಾ.11ರಂದು ರಾತ್ರಿ ಮನೆಗೆ ಬಂದಾಗ ಮನೆ ಬಾಗಿಲು ತೆರೆದಿದ್ದು ತಾಯಿ ಮನೆಯಲ್ಲಿ ಇರಲಿಲ್ಲ. ಬಳಿಕ ನೆರೆಮನೆಯವರ ಸಹಾಯದಿಂದ ಹುಡುಕಾಟ ನಡೆಸಿದಾಗ ತಮ್ಮ ತೋಟದಲ್ಲಿ ಲೀಲಾವತಿ ಅವರು ಬಿದ್ದು ಮೃತಪಟ್ಟಿರುವುದು ಕಂಡುಬಂದಿದೆ.

ಮೃತರ ಒಂದು ಕೈಯಲ್ಲಿ ಕಲ್ಲು ಮತ್ತು ಇನ್ನೊಂದು ಕೈಯಲ್ಲಿ ದೊಣ್ಣೆ ಇದ್ದು, ಜಾನುವಾರುಗಳನ್ನು ಓಡಿಸುವ ವೇಳೆ ಆಕಸ್ಮಿಕವಾಗಿ ಬಿದ್ದಾಗ ಕೈಯಲ್ಲಿದ್ದ ಕಲ್ಲು ಹಣೆಗೆ ತಾಗಿ ಗಂಭೀರ ಗಾಯಗೊಂಡು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಜಾನುವಾರುಗಳ ಉಪಟಳ:
ಕೊಣಾಲು ಗ್ರಾಮದ ತಿರ್ಲೆ ಪರಿಸರದಲ್ಲಿ ಒಂದೇ ಮನೆಯವರಿಗೆ ಸೇರಿದ 50ಕ್ಕೂ ಹೆಚ್ಚು ಜಾನುವಾರುಗಳು ಬಿಡಾಡಿಯಾಗಿ ತಿರುಗುತ್ತಿದ್ದು, ಸ್ಥಳೀಯರ ಕೃಷಿ ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಜೊತೆಗೆ ನಡೆದುಕೊಂಡು ಹೋಗುವ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗೂ ತೊಂದರೆ ಉಂಟಾಗುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

error: Content is protected !!