




ಸುಬ್ರಹ್ಮಣ್ಯ: ದಕ್ಷಿಣ ಭಾರತದ ನಾಗರಾಧನೆಯ ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗ್ಯಾಸ್ ಪೊರೈಕೆ ಸಮಸ್ಯೆ ಹಿನ್ನೆಲೆಯಲ್ಲಿ ಉಪಹಾರ ವ್ಯವಸ್ಥೆಯಲ್ಲಿ ಮಾಡಲಾಗಿದ್ದ ಬದಲಾವಣೆಯನ್ನು ಸರಿಪಡಿಸಿ ಈ ಹಿಂದಿನಂತೆ ಉಪಹಾರ ವಿತರಿಸಲಾಗುತ್ತಿದೆ. ಬೆಳಗಿನ ಉಪಹಾರ, ಮಧ್ಯಾಹ್ನದ ಭೋಜನ ಪ್ರಸಾದ ಹಾಗೂ ರಾತ್ರಿಯ ಭೋಜನ ಪ್ರಸಾದ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.
ಗ್ಯಾಸ್ ಸರಬರಾಜು ಸಮಸ್ಯೆ ಉಂಟಾಗಿದ್ದು ಎರಡು ದಿನಗಳ ಹಿಂದೆ ಕುಕ್ಕೆ ದೇವಸ್ಥಾನದಲ್ಲಿ ಗ್ಯಾಸ್ ಸರಬರಾಜು ವ್ಯತ್ಯಯ ಉಂಟಾಗುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಳಗ್ಗಿನ ಉಪಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಅವಲಕ್ಕಿ ಮೊಸರು ವಿತರಿಸಲಾಗಿತ್ತು. ಬಳಿಕದಲ್ಲಿ ಗ್ಯಾಸ್ ಪೊರೈಸುವ ಸಂಸ್ಥೆಯವರು ಜಿಲ್ಲಾಧಿಕಾರಿಗಳ ಸೂಚನೆಯಂತೆ ಬೇಡಿಕೆಯ ಗ್ಯಾಸ್ ಪೊರೈಕೆ ಮಾಡಿದ್ದರು. ಅಲ್ಲದೆ ಮುಂಜಾಗ್ರತ ಕ್ರಮವಾಗಿ ಕಟ್ಟಿಗೆಯನ್ನು ಕೂಡ ಶೇಖರಣೆ ಮಾಡಲಾಗಿದೆ.
ಆದುದರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದೆ ಬೆಳಗ್ಗೆ ಉಪಹಾರ, ಮಧ್ಯಾಹ್ನದ ಭೋಜನ ಪ್ರಸಾದ ಹಾಗೂ ರಾತ್ರಿಯ ಭೋಜನ ಪ್ರಸಾದ ಈ ಹಿಂದಿನಂತೆಯೇ ನಿರಂತರವಾಗಿ ಮುಂದುವರೆಯುತ್ತದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ತಿಳಿಸಿದ್ದಾರೆ.





