




ನೆಲ್ಯಾಡಿ: 2017ರ ಎಪ್ರಿಲ್ 8ರಂದು ರಾತ್ರಿ ಲಾರಿಗೆ ಕಾರು ಅಡ್ಡಗಟ್ಟಿ ಚಾಲಕನಿಗೆ ಚೂರಿಯಿಂದ ಗಾಯಗೊಳಿಸಿ ಹಣ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಬೆಂಗಳೂರು ಮಾಗಡಿ ಮೂಲದ ನಂಜುಂಡ ಎಂಬಾತ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಳ್ತಂಗಡಿ ನ್ಯಾಯಾಲಯ ಮಾ.13ರಂದು ವಜಾಗೊಳಿಸಿದೆ.
ಪ್ರಾಸಿಕ್ಯೂಷನ್ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ಅವರು ವಾದ ಮಂಡಿಸಿದ್ದು, ಅವರ ವಾದವನ್ನು ಪರಿಗಣಿಸಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹಾಗೂ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ರಾಜೇಂದ್ರ ಪ್ರಸಾದ್ ಅವರು ಆರೋಪಿ ನಂಜುಂಡನ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಘಟನೆಯ ವಿವರ:
2017ರ ಎಪ್ರಿಲ್ 8ರಂದು ಚಿಕ್ಕಮಗಳೂರಿನ ಅಂಬಲೆ ನಿವಾಸಿ ರಾಘವೇಂದ್ರ ಅವರು ಲಾರಿ (ಕೆ.ಎ.40-ಎ-2076)ಯಲ್ಲಿ ಗೌರಿಬಿದನೂರಿನ ತೊಂಡೆಬಾವಿಯಿಂದ ಸಿಮೆಂಟ್ ಲೋಡ್ ಮಾಡಿಕೊಂಡು ಉಡುಪಿ ಕಡೆಗೆ ಹೊರಟಿದ್ದರು. ಅರಸೀಕೆರೆ ಮಾರ್ಗವಾಗಿ ಬರುತ್ತಿದ್ದ ವೇಳೆ ರಾತ್ರಿ ಸುಮಾರು 10.15ರ ಸುಮಾರಿಗೆ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಎಂಜಿರ ಎಂಬಲ್ಲಿ ರಸ್ತೆ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ಮೂತ್ರಶಂಕೆಗೆ ತೆರಳಿದ್ದರು. ಈ ವೇಳೆ ಲಾರಿಗೆ ಒಂದು ಕಾರು ಅಡ್ಡಗಟ್ಟಿ ಐವರು ದರೋಡೆಕೋರರು ಕಾರಿನಿಂದ ಇಳಿದು ಲಾರಿಯೊಳಗೆ ನುಗ್ಗಿದ್ದರು. ಅವರಲ್ಲಿ ಒಬ್ಬ ಚೂರಿ ತೋರಿಸಿ ಚಾಲಕ ರಾಘವೇಂದ್ರ ಅವರನ್ನು ಬೆದರಿಸಿ ಹಣ ಕೇಳಿದ್ದ. ಹಣ ಇಲ್ಲವೆಂದು ತಿಳಿಸಿದಾಗ ದರೋಡೆಕೋರರು ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದರು. ಬಳಿಕ ಚೂರಿಯಿಂದ ರಾಘವೇಂದ್ರ ಅವರ ಎಡಕಾಲಿನ ಮೊಣಗಂಟಿ, ಎದೆಯ ಎಡಭಾಗ ಹಾಗೂ ಬಲಭುಜಕ್ಕೆ ಗಾಯಗೊಳಿಸಿದ್ದರು.
ದರೋಡೆಕೋರರು ರಾಘವೇಂದ್ರ ಅವರಿಂದ ಸುಮಾರು ₹17,000 ನಗದು, ಕರ್ಣಾಟಕ ಬ್ಯಾಂಕ್ ಎಟಿಎಂ ಕಾರ್ಡ್ ಇದ್ದ ಪರ್ಸ್, ಸುಮಾರು ₹12,000 ಮೌಲ್ಯದ ಮೊಬೈಲ್ ಫೋನ್ ಹಾಗೂ ಲಾರಿಯ ಕೀ ಕಸಿದುಕೊಂಡು ಮಹೀಂದ್ರ ಕಾರಿನಲ್ಲಿ ಮಂಗಳೂರು ಕಡೆಗೆ ಪರಾರಿಯಾಗಿದ್ದರು.
ಘಟನೆಯ ಬಳಿಕ ಲಾರಿಯಲ್ಲಿ ನೋಡಿದಾಗ ದರೋಡೆಕೋರರಿಗೆ ಸೇರಿದ ನೋಕಿಯಾ ಕಂಪನಿಯ ಮೊಬೈಲ್ ಫೋನ್ ಸಿಕ್ಕಿದ್ದು, ಬಳಿಕ ದಾರಿಯಲ್ಲಿ ಬಂದವರ ಸಹಾಯದಿಂದ ರಾಘವೇಂದ್ರ ಅವರು ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ನಂತರ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಕುರಿತು 2017ರ ಎಪ್ರಿಲ್ 9ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.65/2017ರಂತೆ ಐಪಿಸಿ 397ರಡಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮಯಾಕೃಷ್ಣ ಯಾನೆ ಮಾಂಗ, ಮಣಿಕಂಠ ಮೂರ್ತಿ, ಪಿಂಟು ಯಾನೆ ಪ್ರಭು, ಕುರಲ್ ಯಾನೆ ಕುಳ್ಳ ಹಾಗೂ ನಂಜುಂಡರನ್ನು ಪೊಲೀಸರು ಬಂಧಿಸಿದ್ದರು.
ಆದರೆ ನಂಜುಂಡ ನಂತರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಧರ್ಮಸ್ಥಳ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.





