




ಸುಳ್ಯ: ಸುಳ್ಯ ಪೇಟೆಯಲ್ಲಿ ಹಲವು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದ ಸುಳ್ಯ ನಿವಾಸಿ ರಕ್ಷಿತ್ ಜಿ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮಾ.12ರಂದು ಸುಳ್ಯ ಪೇಟೆಯಲ್ಲಿ ಸಂಚಾರ ನಿಯಮಗಳನ್ನು ಮರುಮರು ಉಲ್ಲಂಘಿಸುತ್ತಿದ್ದ ಹಿನ್ನೆಲೆಯಲ್ಲಿ ರಕ್ಷಿತ್ ಜಿ ಎಂಬುವನ ಮೇಲೆ ಐಎಂವಿ ಆ್ಯಕ್ಟ್ ಅಡಿಯಲ್ಲಿ ಕಲಂ 119 R/w 177, 184, 194(C) ಪ್ರಕಾರ ಮೂರು ಪ್ರತ್ಯೇಕ ಲಘು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಂತೋಷ್ ಬಿ.ಪಿ ಅವರು ಮಾನ್ಯ ಎಸ್‌ಸಿ ಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಸುಳ್ಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣವು ಸಿ.ಸಿ. 42/26, 43/26 ಮತ್ತು 44/26 ಸಂಖ್ಯೆಯಲ್ಲಿ ವಿಚಾರಣೆಗೊಂಡು, ನ್ಯಾಯಾಲಯವು ಆರೋಪಿಗೆ ಎರಡು ಪ್ರಕರಣಗಳಲ್ಲಿ ಒಟ್ಟು ₹3,000 ದಂಡ ವಿಧಿಸಿದೆ. ಜೊತೆಗೆ ಮೂರು ಪ್ರಕರಣಗಳಲ್ಲಿ ತಲಾ ಐದು ದಿನಗಳಂತೆ ಒಟ್ಟು 15 ದಿನಗಳ ಕಾಲ (ದಿ.15-03-2026ರಿಂದ ದಿ.29-03-2026ರವರೆಗೆ) ಸಮುದಾಯ ಸೇವೆ ನಿರ್ವಹಿಸಲು ಆದೇಶಿಸಿದೆ.
ಸಮುದಾಯ ಸೇವೆಯ ಭಾಗವಾಗಿ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ಹೊಂದಿದ ಫಲಕಗಳನ್ನು ಹಿಡಿದು ಸುಳ್ಯ ಪೇಟೆಯ ಪ್ರಮುಖ ಜಂಕ್ಷನ್‌ಗಳಲ್ಲಿ ನಿಂತು ಸಾರ್ವಜನಿಕರಿಗೆ ಸಂಚಾರ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಇದಲ್ಲದೆ ಆರೋಪಿತನ ಚಾಲನಾ ಪರವಾನಗಿಯನ್ನು ಮೂರು ತಿಂಗಳ ಕಾಲ ಅಮಾನತಿನಲ್ಲಿ ಇಡುವಂತೆ ನ್ಯಾಯಾಲಯ ಆದೇಶಿಸಿದೆ.





