ಅನಾರು: ಡಿ.ವೈ.ಎಫ್.ಐ ಯುವಕರ ಶ್ರಮದಾನದಿಂದ ಶಾಲಾ ಬಾವಿಗೆ ನೀರಿನ ಪರಿಹಾರ

ಶೇರ್ ಮಾಡಿ
ಅನಾರು: ಡಿ.ವೈ.ಎಫ್.ಐ ಯುವಕರ ಶ್ರಮದಾನದಿಂದ ಶಾಲಾ ಬಾವಿಗೆ ನೀರಿನ ಪರಿಹಾರ

ಕೊಕ್ಕಡ: ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಂಕಷ್ಟ ದಿನೇದಿನೇ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ, ಅನಾರು ಶಾಲೆಯಲ್ಲಿ ಉಂಟಾಗಿದ್ದ ನೀರಿನ ಸಮಸ್ಯೆಗೆ ಸ್ಥಳೀಯ ಡಿ.ವೈ.ಎಫ್.ಐ ಯುವಕರು ಶ್ರಮದಾನದ ಮೂಲಕ ಸ್ಪಂದಿಸಿ ಶ್ಲಾಘನೀಯ ಕಾರ್ಯ ನಿರ್ವಹಿಸಿದ್ದಾರೆ.

ಪಟ್ರಮೆಯ ಅನಾರು ಶಾಲಾ ಬಾವಿಯಲ್ಲಿ ಕಳೆದ ವರ್ಷದಿಂದಲೇ ನೀರಿನ ಪ್ರಮಾಣ ತೀವ್ರವಾಗಿ ಕುಂಠಿತಗೊಂಡಿತ್ತು. ಬಾವಿಯಲ್ಲಿ ಕೇವಲ ಐದು ರಿಂದ ಹತ್ತು ನಿಮಿಷಗಳವರೆಗೆ ಮಾತ್ರ ನೀರು ಲಭ್ಯವಾಗುತ್ತಿದ್ದು, ನಂತರ ಸಂಪೂರ್ಣವಾಗಿ ಒಣಗುವ ಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆ ಶಾಲೆಗೆ ನೀರಿನ ಪರ್ಯಾಯ ವ್ಯವಸ್ಥೆಯಾಗಿದ್ದ ಬೋರ್‌ವೆಲ್ ಕೂಡ ಕಳೆದ ವರ್ಷವೇ ನೀರಿಲ್ಲದೆ ನಿರ್ಜೀವವಾಗಿತ್ತು. ಈ ಸಮಸ್ಯೆಯನ್ನು ಮನಗಂಡು ಶಾಲಾ ಆಡಳಿತವು ಜಿ.ಪಂ.ಗೆ ಕಳೆದ ವರ್ಷವೇ ಮನವಿ ಸಲ್ಲಿಸಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಪರಿಣಾಮವಾಗಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕುಡಿಯುವ ನೀರಿಗಾಗಿ ತೀವ್ರ ಸಂಕಷ್ಟ ಅನುಭವಿಸುವಂತಾಗಿತ್ತು.

ಈ ವರ್ಷವೂ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದ್ದು, ಶಾಲೆಯ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಈ ಹಿನ್ನಲೆಯಲ್ಲಿ ಸ್ಥಳೀಯ ಡಿ.ವೈ.ಎಫ್.ಐ ಯುವಕರು ಮಾನವೀಯತೆ ಮೆರೆದಿದ್ದು, ಮಾ.17ರಂದು ಶ್ರಮದಾನದ ಮೂಲಕ ಶಾಲಾ ಬಾವಿಯಲ್ಲಿದ್ದ ಕೆಸರನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾದರು. ಬಾವಿಯ ತಳಭಾಗದಲ್ಲೇ ಕಲ್ಲು ಕಟ್ಟಿದ ರಚನೆಯಿರುವುದರಿಂದ ಬಾವಿಯನ್ನು ಇನ್ನಷ್ಟು ಆಳ ಮಾಡಲು ಸಾಧ್ಯವಾಗದಿದ್ದರೂ, ಕೆಸರು ತೆಗೆಯುವ ಮೂಲಕ ನೀರಿನ ಸಂಗ್ರಹಣೆಗೆ ಅವಕಾಶ ಕಲ್ಪಿಸಲಾಗಿದೆ. ಯುವಕರ ಈ ಕಾರ್ಯದಿಂದ ತಾತ್ಕಾಲಿಕವಾಗಿ ನೀರಿನ ಲಭ್ಯತೆ ಸುಧಾರಿಸುವ ನಿರೀಕ್ಷೆಯಿದೆ.

ಶ್ರಮದಾನ ಕಾರ್ಯದಲ್ಲಿ ಯುವಕರಾದ ನಿತಿನ್, ಚೋಮ, ಅಖಿಲೇಶ್, ರೋಹಿತ್, ವಿಶಾಲು, ಜಯಂತ, ವಿನುಶ, ವಸಂತ ಟೈಲರ್, ಶೀನ ಸೇರಿದಂತೆ ಹಲವರು ಭಾಗವಹಿಸಿದ್ದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಧನಂಜಯ ಹಾಗೂ ಮಾಜಿ ಅಧ್ಯಕ್ಷ ಶ್ಯಾಮರಾಜ್ ಉಪಸ್ಥಿತರಿದ್ದು, ಸಹಕಾರ ನೀಡಿದರು.

ಈ ಸಂದರ್ಭ ಸ್ಥಳೀಯರು, ಕ್ಷೇತ್ರ ಶಿಕ್ಷಣ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ತಕ್ಷಣವೇ ಕ್ರಮ ಕೈಗೊಂಡು ಶಾಲೆಗೆ ಅಗತ್ಯವಿರುವ ಕೊಳವೆಬಾವಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

error: Content is protected !!