





ನೆಲ್ಯಾಡಿ: ರಾಮನಗರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ(ನಿ) ಇವರ ನೇತೃತ್ವದಲ್ಲಿ, ರೋಟರಿ ಕ್ಲಬ್ ಪುತ್ತೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ (ಪುತ್ತೂರು-ಮಂಗಳೂರು-ಸುಳ್ಯ) ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ದಂದು ರಾಮನಗರ ಹಾಲಿನ ಡೈರಿಯ ಆವರಣದಲ್ಲಿ ಉಚಿತ ಕಣ್ಣಿನ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಯಶಸ್ವಿಯಾಗಿ ನಡೆಯಿತು.
ಸಂಘದ ಸ್ಥಾಪಕ ಅಧ್ಯಕ್ಷೆ ಆಶಾ ಎಸ್ ಜೋಗಿತ್ತಾಯ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಡಳಿತ ಮಂಡಳಿಯ ಅಧ್ಯಕ್ಷೆ ರೂಪಾ ಪಿ ಕೊಡಂಗೆ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಡೈರಿ ಆರಂಭದ ವೇಳೆಯಲ್ಲಿ ಜಾಗ ಒದಗಿಸಿ ಸಹಕರಿಸಿದ ರಾಮನಗರ ಭಾಗದ ಹಿರಿಯ ವಿಠ್ಠಲ ಮಾರ್ಲ, ನೇತ್ರ ತಜ್ಞ ಡಾ.ಆಶಿಕ್, ಪುತ್ತೂರು ಪ್ರಸಾದ್ ನೇತ್ರಾಲಯ ಇದರ ಸಾರ್ವಜನಿಕ ಸಂಪರ್ಕಾಧಿಕಾರಿ ಮನೋಹರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಡುಬೆಟ್ಟು ಒಕ್ಕೂಟದ ಅಧ್ಯಕ್ಷ ಜೋನ್ ಮೋಂತೆರೋ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಾಶಯ ಕೋರಿದರು.
ಶಿಬಿರದಲ್ಲಿ ಸುಮಾರು 50ಕ್ಕೂ ಅಧಿಕ ಮಂದಿ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಊರಿನ ಗಣ್ಯರು ಹಾಗೂ ಹೈನುಗಾರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಂಘದ ನಿರ್ದೇಶಕಿಯರಾದ ಉಮಾವತಿ ಹೊಸಮನೆ, ಸೌಮ್ಯ ಕಾನಮನೆ, ಸವಿತಾ ಹುಣ್ಸೆಬೆಟ್ಟು, ಜಾನಕಿ ಕಲ್ಲೇರಿ, ಚಿತ್ರಾ ಹುಣ್ಸೆಬೆಟ್ಟು, ಮಾಜಿ ನಿರ್ದೇಶಕಿ ಅನಸೂಯ ಜಿ ಹಾಗೂ ಸಿಬ್ಬಂದಿಗಳಾದ ಗೀತಾ ಕಲ್ಲೇರಿ, ರಂಜಿತಾ ದರ್ಖಾಸು, ಮನೋಜ್ ಕುಮಾರ್ ಎನ್ ನಡುಮನೆ ಸಹಕರಿಸಿದರು.
ಭವಾನಿ ಗಾಣಂತಿ ಪ್ರಾರ್ಥಿಸಿದರು. ಕಾರ್ಯದರ್ಶಿ ಕಮಲ ಸ್ವಾಗತಿಸಿದರು, ನಿರ್ದೇಶಕಿ ರಜನಿ ಜಾಲ್ಮನೆ ನಿರೂಪಿಸಿದರು. ಶೀನಪ್ಪ ಬರೆಮೇಲು ವಂದಿಸಿದರು.




