SSLC Maths Exam: ಪರೀಕ್ಷೆಯಲ್ಲಿ ಪಠ್ಯ ಹೊರತಾದ ಪ್ರಶ್ನೆ? 21 ಅಂಕಗಳ ಕಠಿಣ ಪ್ರಶ್ನೆ | ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ

ಶೇರ್ ಮಾಡಿ

 

ಬೆಂಗಳೂರು: ರಾಜ್ಯಾದ್ಯಂತ ಶನಿವಾರ ನಡೆದ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆಯಲ್ಲಿ ಕೇಳಲಾದ 16 ಅಂಕದ ಪ್ರಶ್ನೆಗಳು ಪಠ್ಯದಲ್ಲಿ ಇರಲಿಲ್ಲ ಮತ್ತು 21 ಅಂಕಗಳ ಅತಿ ಕಠಿಣ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಗಣಿತ ಶಿಕ್ಷಕರ ಸಂಘ ಹಾಗೂ ಪೋಷಕರು ಆರೋಪಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೃಪಾಂಕ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಬಹುಪದೋಕ್ತಿ (1), ನಿರ್ದೇಶಾಂಕ ರೇಖಾಗಣಿತ (2), ವೃತ್ತಗಳು (2), ತ್ರಿಭುಜಗಳು (3), ವರ್ಗ ಸಮೀಕರಣಗಳು (1), ಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲಗಳು (5) ಹೀಗೆ ಪಠ್ಯದಲ್ಲಿ ಇಲ್ಲದ 16 ಅಂಕಗಳ ಪ್ರಶ್ನೆಗಳು ಪ್ರಶ್ನೆಪತ್ರಿಕೆಯಲ್ಲಿದ್ದವು ಸಾಮಾನ್ಯವಾಗಿ ಒಂದೆರಡು ಅನ್ವಯಿಕ ಪ್ರಶ್ನೆಗಳನ್ನು ಪ್ರತಿ ವರ್ಷ ನೀಡಲಾಗುತ್ತದೆ. ಆದರೆ ಈ ಬಾರಿ ಅನ್ವಯಿಕ ಪ್ರಶ್ನೆಗಳೇ ಹೆಚ್ಚಾಗಿದ್ದವು.

ಹೀಗಾಗಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಪಾಸಾಗಲು ಒದ್ದಾಡಿದ್ದಾರೆ. ನೂರಕ್ಕೆ ನೂರು ಅಂಕಗಳ ಗುರಿ ಹೊಂದಿರುವ ವಿದ್ಯಾರ್ಥಿಗಳು ನಿರಾಶರಾಗಿದ್ದಾರೆ. ಪ್ರಶ್ನೆ ಪತ್ರಿಕೆಯಲ್ಲಿ 21 ಅಂಕದ ಕಠಿಣ ಪ್ರಶ್ನೆಗಳು ಮತ್ತು 16 ಅಂಕದ ಪಠ್ಯದಲ್ಲಿ ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳು ಸೇರಿ ಒಟ್ಟಾರೆ 37 ಅಂಕದ ಪ್ರಶ್ನೆಗಳು ವಿದ್ಯಾರ್ಥಿಗಳಿಗೆ ಸವಾಲಾಗಿದ್ದವು ಎಂದು ದೂರಲಾಗಿದೆ.

ಈ ಸಮಸ್ಯೆಯ ಕುರಿತು ಈಗಾಗಲೇ ಗಣಿತ ಶಿಕ್ಷಕರ ಸಂಘದ ಪದಾಧಿಕಾರಿಗಳು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರಿಗೆ ಮನವಿ ಸಲ್ಲಿಸಿದ್ದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅನ್ಯಾಯ ಸರಿಪಡಿಸುವಂತೆ ಕೋರಿದ್ದಾರೆ.

ದಿಕ್ಕುತಪ್ಪಿಸಿದ ಮಾದರಿ ಪ್ರಶ್ನೆಪತ್ರಿಕೆ
ಶಿಕ್ಷಣ ಇಲಾಖೆ ಪ್ರಥಮ ಬಾರಿಗೆ ಮೂರು ಪೂರ್ವಸಿದ್ದತೆ ಪರೀಕ್ಷೆ ನಡೆಸಿತು. ಜತೆಗೆ ನಾಲ್ಕು ಮಾದರಿ ಪ್ರಶ್ನೆಪತ್ರಿಕೆಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು. ಪ್ರಶ್ನೆಪತ್ರಿಕೆ ಬ್ಲೂಪ್ರಿಂಟ್‌ನಲ್ಲಿ ಶೇ. 20ರಷ್ಟು ಕಠಿಣ, ಶೇ. 20ರಷ್ಟು ಸುಲಭ ಮತ್ತು ಶೇ. 40ರಷ್ಟು ಮಧ್ಯಮ ಮಟ್ಟದ ಪ್ರಶ್ನೆಗಳಿರಬೇಕು ಎಂಬ ನಿಯಮವಿದೆ. ಎಸ್ಸೆಸ್ಸೆಲ್ಸಿ ಮಂಡಳಿಯು ಈ ವರ್ಷ ನೀಡಿದ ಎಲ್ಲ 7 ಪ್ರಶ್ನೆಪತ್ರಿಕೆಗಳಲ್ಲಿ ಶೇ.20, ಅಂದರೆ 16 ಅಂಕಗಳಿಗೆ ಕಠಿಣ ಪ್ರಶ್ನೆಗಳಿವೆ. ಆದರೆ ಪ್ರಸ್ತುತ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ 35ಕ್ಕೂ ಹೆಚ್ಚು ಅಂಕಗಳಿಗೆ ಕಠಿಣ ಪ್ರಶ್ನೆಗಳನ್ನು ಕೇಳಲಾಗಿತ್ತು. ಹೀಗಾಗಿ ಕೃಪಾಂಕ ನೀಡುವಂತೆ ಒತ್ತಾಯಿಸಿ ಶಿವಮೊಗ್ಗ ಹಾಸನ ಸೇರಿ ನಾನಾ ಜಿಲ್ಲೆಗಳ ಗಣಿತ ಶಿಕ್ಷಕರ ಸಂಘಗಳು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.

ಈ ಸಮಸ್ಯೆಯ ಕುರಿತು ಈಗಾಗಲೇ ಗಣಿತ ಶಿಕ್ಷಕರ ಸಂಘದ ಪದಾಧಿಕಾರಿಗಳು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರಿಗೆ ಮನವಿ ಸಲ್ಲಿಸಿದ್ದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅನ್ಯಾಯ ಸರಿಪಡಿಸುವಂತೆ ಕೋರಿದ್ದಾರೆ.

ನಾಳೆ ಸಭೆಯಲ್ಲಿ ಚರ್ಚೆ
ಈ ಹಿನ್ನೆಲೆಯಲ್ಲಿ ಮಾರ್ಚ್ 31ರ ಮಂಗಳವಾರದಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು ಹಾಗೂ ಪರೀಕ್ಷಾ ಮಂಡಳಿ ನಿರ್ದೇಶಕರ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕೃಪಾಂಕ ನೀಡುವ ಬಗ್ಗೆ ಅಥವಾ ಮೌಲ್ಯಮಾಪನದ ವೇಳೆ ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

 

Leave a Reply

error: Content is protected !!