





ಬೆಳ್ತಂಗಡಿ: ನಿಡ್ಲೆ ಗ್ರಾಮದ ಬರೆಂಗಾಯದ ಕಾಟ್ಲ ಎಂಬಲ್ಲಿ ಮಾ.31 ರಂದು ವಿದೇಶಿ ಗುರುತು ಇರುವ ವಿಚಿತ್ರ ವಸ್ತುವೊಂದು ಮಾ.31 ಕಂಡುಬಂದ ಕಾರಣ ಮನೆಮಂದಿ ಆತಂಕಕ್ಕೆ ಒಳಗಾದ ಘಟನೆ ನಡೆದಿದೆ. ಕಾಟ್ಲ ನಿವಾಸಿ ಕೃಷ್ಣ ಕುಮಾರ್ ಎಂಬುವವರ ಜಮೀನಿನಲ್ಲಿ ಈ ವಸ್ತು ಕಂಡು ಬಂದಿದ್ದು ಮನೆಯಿಂದ 40 ಮೀಟರ್ ಅಂತರದಲ್ಲಿ ಕಾಣಿಸಿಕೊಂಡಿದೆ. ಇದು ಹವಾಮಾನ ಇಲಾಖೆಯು ಮೇಲ್ಮೈ ಗಾಳಿ ವೀಕ್ಷಣೆಗಾಗಿ ಪ್ರತಿದಿನ ಬಿಡುವ ಜಿಪಿಎಸ್ ಆಧರಿತ ಉಪಕರಣವಾಗಿದೆ ಎಂದು ತಿಳಿದುಬಂದಿದೆ. ಇದು ಯಾವುದೇ ಅಪಾಯಕಾರಿ ವಸ್ತುವಲ್ಲವೆಂದು ಇಲಾಖೆ ಸ್ಪಷ್ಟಪಡಿಸಿದೆ.
ಹೈಡ್ರೋಜನ್ ಅನಿಲ ತುಂಬಿದ ಹವಾಮಾನ ಬಲೂನ್ ಬಳಸಿ ಮಂಗಳೂರು ಡಾಪ್ಲರ್ ವೆದರ್ ರಾಡಾರ್ ಕೇಂದ್ರದಿಂದ ಪ್ರತಿದಿನ ಬೆಳಿಗ್ಗೆ 4.30 ರ ಸುಮಾರಿಗೆ ಜಿಪಿಎಸ್ ಆಧರಿತ ಈ ಉಪಕರಣವನ್ನು ಬಿಡುಗಡೆ ಮಾಡಲಾಗುತ್ತದೆ. ಇದು ಗಾಳಿಯ ಮೇಲಿನ ತಾಪಮಾನ, ಆರ್ದ್ರತೆ, ಗಾಳಿಯ ದಿಕ್ಕು,ಗಾಳಿಯ ವೇಗ ಮತ್ತು ಇತರ ವಾತಾವರಣದ ನಿಯತಾಂಕಗಳ ಡೇಟಾವನ್ನು ಸಂಗ್ರಹಿಸುತ್ತದೆ. ವಾಯುಯಾನ, ಮಿಲಿಟರಿ ಕಾರ್ಯಾಚರಣೆಗಳು ಮತ್ತು ವಾಯುಮಂಡಲದ ಉಡಾವಣಾ ಚಟುವಟಿಕೆಗಳಿಗೆ ಇಂತಹ ಡೇಟಾ ನಿರ್ಣಾಯಕವಾಗಿದೆ.
ಉಪಕರಣವು ಸಾಮಾನ್ಯವಾಗಿ ಅದರ ವೀಕ್ಷಣಾ ಚಕ್ರವನ್ನು ಪೂರ್ಣಗೊಳಿಸಿದ ನಂತರ ಕೆಳಗಿಳಿಯುತ್ತದೆ ಅಥವಾ ಅರೇಬಿಯನ್ ಸಮುದ್ರದಲ್ಲಿ ಅಥವಾ ಭೂಮಿಯಲ್ಲಿ ಇಳಿಯಬಹುದು. ಕಾಟ್ಲದಲ್ಲಿ ಬಿದ್ದಿದ್ದು ಇಂಡಿಯನ್ ಮೆಟರೋಜಿಕಲ್ ಡಿಪಾರ್ಟ್ಮೆಂಟ್’ ಶಕ್ತಿನಗರ ಮಂಗಳೂರು ಎಂಬ ಸ್ಟಿಕ್ಕರ್ ಹೊಂದಿತ್ತು. ಈ ಉಪಕರಣವನ್ನು ಆಮದು ಮಾಡಿಕೊಳ್ಳಲಾಗಿದೆ ಮತ್ತು ಮೂಲ ಸ್ಟಿಕ್ಕರ್‌ನ್ನು ಹೊಂದಿದೆ. ಇದರ ಸಂಪೂರ್ಣ ಹೊಣೆಯನ್ನು ಭಾರತೀಯ ಹವಾಮಾನ ಇಲಾಖೆ ನಿರ್ವಹಿಸುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಈ ಉಪಕರಣ ಸುಮಾರು ಆರು ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿರುವ ಒಂದು ಬಾರಿ ಬಳಕೆಯ ಸಾಧನವಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ ಹಿಂಪಡೆಯಲಾಗುವುದಿಲ್ಲ. ಏಕೆಂದರೆ ಇಂತಹ ಸಾಧಣಾ ಪ್ರತಿದಿನ ನಾನಾ ಸ್ಥಳಗಳಲ್ಲಿ ಇಳಿಯುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಹಿಂದೆ ಜ.25 ರಂದು ಪುತ್ತಿಲ ಗ್ರಾಮದಲ್ಲಿ ಇಂತಹ ಉಪಕರಣ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಆ ಸಂದರ್ಭ ಕಂಡು ಬಂದ ಉಪಕರಣವನ್ನು ಸಂಗ್ರಹಿಸಲು ಐಎಂಡಿ ಸಿಬ್ಬಂದಿಗಳು ಆಗಮಿಸಿದ್ದರು.




