





ನೆಲ್ಯಾಡಿ: ಪೆರಿಯಶಾಂತಿಯಿಂದ ಇಚಿಲಂಪಾಡಿ ಕಡೆಗೆ ಸಾಗುವ ಪ್ರಮುಖ ರಸ್ತೆಯಲ್ಲಿ ‘‘ಎನ್ಎಚ್ಎಐ ಆನ್ ಡ್ಯೂಟಿ’ ಸ್ಟಿಕ್ಕರ್ ಅಳವಡಿಸಿದ ವಾಹನದಿಂದಲೇ ರಸ್ತೆ ಬದಿಗೆ ಕಸ ಎಸೆಯುತ್ತಿರುವ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯರ ತಕ್ಷಣದ ಜಾಗೃತಿಯಿಂದ ತಪ್ಪಿತಸ್ಥರನ್ನು ಪ್ರಶ್ನಿಸಿ ಅವರಿಂದಲೇ ಕಸವನ್ನು ಮರು ಸಂಗ್ರಹ ಮಾಡಿಸಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಇಚಿಲಂಪಾಡಿ ಕ್ರಿಶ್ಚಿಯನ್ ಬ್ರದರ್ಸ್ ತಂಡದ ಅಧ್ಯಕ್ಷ ಜಾನ್ಸನ್ ಕೆ.ಜೆ ಅವರು ಈ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದಾಗ, ‘‘ಎನ್ಎಚ್ಎಐ ಆನ್ ಡ್ಯೂಟಿ’ ಸ್ಟಿಕ್ಕರ್ ಅಳವಡಿಸಿದ ವಾಹನದಲ್ಲಿ ಬಂದು ಕಸವನ್ನು ರಸ್ತೆಯ ಬದಿಗೆ ಎಸೆಯುತ್ತಿರುವುದನ್ನು ಗಮನಿಸಿದರು. ತಕ್ಷಣವೇ ಅವರು ವಾಹನವನ್ನು ತಡೆದು, ಕಸ ಎಸೆಯುತ್ತಿದ್ದವರನ್ನು ಪ್ರಶ್ನಿಸಿ ಕಠಿಣವಾಗಿ ಎಚ್ಚರಿಸಿದರು. ಬಳಿಕ ಅವರಿಂದಲೇ ಎಸೆಯಲಾದ ಕಸವನ್ನು ಮತ್ತೆ ತೆಗೆಸಿದ ಘಟನೆ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಯಿತು. ಈ ವೇಳೆ ಅಲ್ಲಿಂದ ಸಂಚರಿಸುತ್ತಿದ್ದ ಇತರ ಸ್ಥಳೀಯರೂ ಕೂಡ ಕಸ ಎಸೆಯುವವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪರಿಸರದ ಬಗ್ಗೆ ಜವಾಬ್ದಾರಿತನ ಹೊಂದಬೇಕೆಂದು ಎಚ್ಚರಿಸಿದರು.
ರಸ್ತೆ ಬದಿಯಲ್ಲಿ ಹೆಚ್ಚುತ್ತಿರುವ ಕಸದ ಸಮಸ್ಯೆ:
ಪೆರಿಯಶಾಂತಿ–ಇಚಿಲಂಪಾಡಿ ರಸ್ತೆಯ ಎರಡೂ ಬದಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಹಳೆಯ ಬಟ್ಟೆಗಳು ಹಾಗೂ ಕಾರ್ಯಕ್ರಮಗಳಲ್ಲಿ ಉಳಿದ ತ್ಯಾಜ್ಯಗಳನ್ನು ನಿರಂತರವಾಗಿ ಸುರಿಯಲಾಗುತ್ತಿದ್ದು, ಪರಿಸರ ಮಾಲಿನ್ಯ ತೀವ್ರಗೊಳ್ಳುತ್ತಿದೆ. ಕೆಲ ಕಿಡಿಗೇಡಿಗಳು ಈ ಪ್ರದೇಶವನ್ನು ಕಸ ತ್ಯಾಜ್ಯ ತಳ್ಳುವ ಸ್ಥಳವನ್ನೇ ಮಾಡಿಕೊಂಡಿರುವುದು ಸ್ಥಳೀಯರಿಗೆ ದೊಡ್ಡ ತಲೆನೋವಾಗಿದೆ.
ಇತರ ಕಡೆ ದಂಡ – ಇಲ್ಲಿ ಕ್ರಮವೇ ಇಲ್ಲ!
ಜಿಲ್ಲೆಯ ಹಲವು ಕಡೆಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವವರ ಮೇಲೆ ಸ್ಥಳೀಯ ಸಂಸ್ಥೆಗಳು ದಂಡ ವಿಧಿಸಿ ಕಠಿಣ ಕ್ರಮ ಕೈಗೊಳ್ಳುತ್ತಿರುವುದು ಕಂಡುಬರುತ್ತಿದೆ. ಆದರೆ ಇದೇ ಸಮಸ್ಯೆ ಇಚಿಲಂಪಾಡಿ ಭಾಗದಲ್ಲಿ ತೀವ್ರವಾಗಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಪ್ರಶ್ನಾರ್ಹವಾಗಿದೆ. ಗ್ರಾಮ ಪಂಚಾಯಿತಿ ಗ್ರಾಮಸಭೆಗಳಲ್ಲಿ ಈ ವಿಷಯ ಹಲವು ಬಾರಿ ಪ್ರಸ್ತಾಪವಾಗಿದ್ದು, ಸಿಸಿ ಕ್ಯಾಮೆರಾ ಅಳವಡಿಕೆ ಕಸ ಎಸೆಯುವವರ ವಿರುದ್ಧ ದಂಡಾತ್ಮಕ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದ್ದರೂ, ಅದು ಕೇವಲ ಚರ್ಚೆಗಳ ಮಟ್ಟದಲ್ಲೇ ಉಳಿದಿದೆ. ಇದರಿಂದ ಕಿಡಿಗೇಡಿಗಳಿಗೆ ಈ ಪ್ರದೇಶದಲ್ಲಿ ನಿರ್ಭಯವಾಗಿ ಕಸ ಎಸೆಯಲು ಅವಕಾಶ ಸಿಕ್ಕಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜನರ ಜಾಗೃತಿ – ಆಡಳಿತದ ನಿರ್ಲಕ್ಷ್ಯ
ಸ್ಥಳೀಯರು ತಾವೇ ಮುಂದಾಗಿ ಕಸ ಎಸೆಯುವವರನ್ನು ತಡೆದು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾದರೂ, ಇದು ಶಾಶ್ವತ ಪರಿಹಾರವಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದರೆ ಸಮಸ್ಯೆ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ಕಠಿಣ ದಂಡಾತ್ಮಕ ಕ್ರಮ ಜಾರಿಗೊಳಿಸುವರೇ? ಅಥವಾ ಈ ಪ್ರದೇಶ ಕಸದ ಗುಡ್ಡೆಯಾಗಿ ಉಳಿಯುವದೇ ಎಂಬುದನ್ನು ಕಾದು ನೋಡಬೇಕಾಗಿದೆ.




