





ಕೊಕ್ಕಡ: ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿ ಅನಘ.ಕೆ ಅವರು ವಿಜ್ಞಾನ ವಿಭಾಗದಲ್ಲಿ 600ಕ್ಕೆ 597 (99.5%) ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಇವರು ಕನ್ನಡ, ಗಣಿತ ಹಾಗೂ ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ಪೂರ್ಣ 100 ಅಂಕಗಳನ್ನು ಗಳಿಸಿದ್ದು, ಇಂಗ್ಲಿಷ್, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ತಲಾ 99ಅಂಕಗಳನ್ನು ಪಡೆದು ತನ್ನ ಶೈಕ್ಷಣಿಕ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಅನಘ.ಕೆ ಅವರು ನೆಲ್ಯಾಡಿಯ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹಳೆ ವಿದ್ಯಾರ್ಥಿನಿಯಾಗಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿಯೂ 625ಕ್ಕೆ 616 ಅಂಕಗಳನ್ನು ಗಳಿಸಿ ಈಗಾಗಲೇ ಶ್ರೇಷ್ಠ ಸಾಧನೆ ಮಾಡಿದ್ದರು.
ಇವರು ನೆಲ್ಯಾಡಿ ಸಂತ ಚಾರ್ಜ್ ಪದವಿ ಪೂರ್ವ ಕಾಲೇಜಿನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಹರಿಪ್ರಸಾದ್ ಕೆದಿಲಾಯ ಹಾಗೂ ಶ್ವೇತಾ ದಂಪತಿಗಳ ಪುತ್ರಿಯಾಗಿದ್ದಾರೆ
ಅನಘ.ಕೆ ಅವರ ಈ ಸಾಧನೆಗೆ ಕುಟುಂಬದವರು, ಗುರುಗಳು ಹಾಗೂ ಸ್ನೇಹಿತರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.




