





ಬಂಟ್ವಾಳ : 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಬಂಟ್ವಾಳ ನಿವಾಸಿಗಳಾದ ತಾಯಿ ಮತ್ತು ಮಗಳು ಏಕಕಾಲದಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಬಿ.ಸಿ. ರೋಡಿನ ಕೈಕಂಬ ನಿವಾಸಿ ಗೃಹಿಣಿ ನೇತ್ರಾವತಿ ವಿ.ಆರ್ ಅವರು ಪಿಯುಸಿ ಪಾಸ್ ಆಗಬೇಕೆಂಬ ಕನಸಿನೊಂದಿಗೆ ಈ ವರ್ಷ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆಗೆ ಹಾಜರಾಗಿದ್ದು, ಮೊದಲ ಪ್ರಯತ್ನದಲ್ಲೇ ಕಲಾ ವಿಭಾಗದಲ್ಲಿ 257 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರ ಮಗಳು ಹೇಮಶ್ರೀ ಆರ್. ಸರಕಾರಿ ಪದವಿಪೂರ್ವ ಕಾಲೇಜು ಬಿ.ಮೂಡ ವಿದ್ಯಾರ್ಥಿನಿಯಾಗಿದ್ದು, ಇದೇ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 562 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಪತ್ನಿ ಮತ್ತು ಮಗಳು ಒಂದೇ ವೇಳೆ ಸಾಧನೆ ಮಾಡಿರುವ ಸಂತಸವನ್ನು ಕುಟುಂಬದ ಮುಖ್ಯಸ್ಥ ಹಾಗೂ ನಂದಾವರ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರವಿಕುಮಾರ್ ಹಂಚಿಕೊಂಡಿದ್ದಾರೆ.




