ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಾರ್ಯಕ್ರಮ ಉದ್ಘಾಟನೆ

ಶೇರ್ ಮಾಡಿ

 

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಾರ್ಯಕ್ರಮ ಉದ್ಘಾಟನೆ

ಪುತ್ತೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್ (ನೋಂ) ಕರ್ನಾಟಕ, ಪುತ್ತೂರು ತಾಲೂಕು ಸಮಿತಿ, ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ನೂತನ ವರ್ಷದ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಯುಗಾದಿ ಪ್ರಯುಕ್ತ ವಿಶೇಷ ಕಾರ್ಯಕ್ರಮವು ಶ್ರೀ ಸರಸ್ವತಿ ವಿದ್ಯಾ ಮಂದಿರ ನರಿಮೊಗರು ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ವಿವೇಕಾನಂದ ಮಹಾವಿದ್ಯಾಲಯದ ಅಧ್ಯಕ್ಷರು ಹಾಗೂ ಸಮಿತಿಯ ಗೌರವಾಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, “ಒಬ್ಬ ವ್ಯಕ್ತಿಯು ಉತ್ತಮ ಜೀವನ ನಡೆಸಲು ಸಾಹಿತ್ಯದ ಪಾತ್ರ ಅಪಾರವಾಗಿದೆ. ಸಾಹಿತ್ಯದ ಮೂಲಕ ಜೀವನದ ಮೌಲ್ಯಗಳನ್ನು ಅರಿಯಲು ಸಾಧ್ಯವಾಗುತ್ತದೆ. ಇಂತಹ ಸಾಹಿತ್ಯ ಚಟುವಟಿಕೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವುದು ಅತ್ಯಂತ ಅಗತ್ಯವಾಗಿದೆ. ಮನೆ ಮನೆಗಳಲ್ಲಿ ಸಾಹಿತ್ಯ ಚಟುವಟಿಕೆಗಳು ನಡೆಯುವ ಮೂಲಕ ಅದರ ಅಭಿರುಚಿ ಎಲ್ಲರಲ್ಲಿಯೂ ಬೆಳೆಯಬೇಕು. ಪುತ್ತೂರು ತಾಲೂಕು ಸಮಿತಿ ಈ ವರ್ಷ ರಾಷ್ಟ್ರೀಯತೆಯ ಒಲವು ಮೂಡಿಸುವ ಅನೇಕ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಿ” ಎಂದು ಶುಭ ಹಾರೈಸಿದರು.

ಬಳಿಕ ವಿಶೇಷ ಉಪನ್ಯಾಸ ನೀಡಿದ ಸರಸ್ವತಿ ವಿದ್ಯಾ ಮಂದಿರ ನರಿಮೊಗರು ಅಧ್ಯಕ್ಷರಾದ ಅವಿನಾಶ ಕೊಡಂಕಿರಿ ಅವರು, “ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸರ್ವ ಭಾಷೆಗಳನ್ನು ಒಳಗೊಂಡ ಸಾಹಿತ್ಯ ಸೇವೆಯನ್ನು ಮಾಡುತ್ತಿದೆ. ಪ್ರತಿಯೊಬ್ಬರೂ ವಿಭಿನ್ನ ಭಾಷೆಗಳನ್ನು ಕಲಿಯುವುದು ಅಗತ್ಯ. ಅವಿಭಜಿತ ದಕ್ಷಿಣ ಕನ್ನಡದ ಜನರಿಗೆ ಬಹುಭಾಷಾ ಜ್ಞಾನ ಸಹಜವಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಭಾಷೆಗಳ ಪ್ರಮಾಣವನ್ನು ಕಡಿಮೆ ಮಾಡುವ ಬದಲು ಹೆಚ್ಚಿಸಿದರೆ, ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿ ಹೆಚ್ಚುತ್ತದೆ” ಎಂದು ಅಭಿಪ್ರಾಯಪಟ್ಟರು. ಈ ವೇಳೆ ಅವರು ಹಿರಿಯ ಸಾಹಿತಿ ಡಾ. ಕೆ. ವಿಷ್ಣು ಅವರ ಕೃತಿಗಳ ಪರಿಚಯ ಮಾಡಿಕೊಟ್ಟರು.

ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಡಾ.ಕೆ.ವಿಷ್ಣು ಅವರು, “ನಾವು ಸದಾ ವಿನಯದಿಂದ ಕಲಿಯುವ ಮನೋಭಾವವನ್ನು ಹೊಂದಿರಬೇಕು. ‘ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ’ ಎಂಬ ಮನೋಭಾವದಿಂದ ಬದುಕಿದಾಗ ಜ್ಞಾನಾರ್ಜನೆ ಸಾಧ್ಯವಾಗುತ್ತದೆ. ಪರರಿಗೆ ಪೀಡೆ ನೀಡದೆ, ಲೋಕಹಿತಕ್ಕಾಗಿ ದುಡಿಯುವ ಧ್ಯೇಯ ನಮ್ಮ ಸಂಸ್ಕೃತಿಯ ಮೂಲ. ಸಾಹಿತ್ಯ ಬಲಿಷ್ಠವಾದಾಗ ಈ ಮೌಲ್ಯಗಳು ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತವೆ” ಎಂದು ಹೇಳಿದರು.

ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷರಾದ ಗಣರಾಜ ಕುಂಬಳೆ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ವೇದಿಕೆಯಲ್ಲಿ ಪರಿಷತ್ ವಿಭಾಗ ಸಂಯೋಜಕರಾದ ಸುಂದರ ಇಳಂತಿಲ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಮಿತಿಯ ಸದಸ್ಯರಾದ ಕುಮಾರ್ ಪೆರ್ನಾಜೆ ಸ್ವಾಗತಿಸಿದರು. ವಿಶ್ವನಾಥ ಕುಲಾಲ್ ಧನ್ಯವಾದ ಸಮರ್ಪಿಸಿದರು. ಸಮಿತಿಯ ಸದಸ್ಯೆ ಸ್ವಪ್ನ ಉದಯ್ ಕುಮಾರ್ ಸರಸ್ವತಿ ವಂದನೆ ನೆರವೇರಿಸಿದರು. ಕಾರ್ಯದರ್ಶಿ ನವೀನ ಕೃಷ್ಣ ಶಾಂತಿಮಂತ್ರ ಪಠಿಸಿದರು. ಮಾಧ್ಯಮ ಪ್ರಮುಖ ಚೇತನ್ ಮೊಗ್ರಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.

 

Leave a Reply

error: Content is protected !!