ನೆಲ್ಯಾಡಿ ವಲಯ ಮೇಲ್ವಿಚಾರಕ ಆನಂದ ಡಿ.ವಿ ಅವರಿಗೆ ಬೀಳ್ಕೊಡುಗೆ

ಶೇರ್ ಮಾಡಿ

 

ನೆಲ್ಯಾಡಿ ವಲಯ ಮೇಲ್ವಿಚಾರಕ ಆನಂದ ಡಿ.ವಿ ಅವರಿಗೆ ಗೌರವಪೂರ್ಣ ಬೀಳ್ಕೊಡುಗೆ

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಡಬ ತಾಲೂಕು ನೆಲ್ಯಾಡಿ ವಲಯದ ವಲಯ ಮೇಲ್ವಿಚಾರಕರಾಗಿದ್ದ ಆನಂದ ಡಿ.ವಿ ಅವರು ಮುಂಬಡ್ತಿ ಹೊಂದಿ ವರ್ಗಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭವನ್ನು ಬುಧವಾರ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯ, ನೆಲ್ಯಾಡಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸೇವಾ ಪ್ರತಿನಿಧಿಗಳು ಒಟ್ಟಾಗಿ ಸೇರಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಅವರು, ನೆಲ್ಯಾಡಿ ವಲಯವು ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಆನಂದ ಡಿ.ವಿ ಅವರು ಕಳೆದ ಎರಡು ವರ್ಷಗಳಿಂದ ವಲಯ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದ್ದ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮಗಳು, ಮಧ್ಯವರ್ಜನ ಶಿಬಿರಗಳು, ಜನಜಾಗೃತಿ ಕಾರ್ಯಕ್ರಮಗಳು ಹಾಗೂ ಪ್ರಗತಿ ಬಂಧು ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ಹಾಗೂ ಪ್ರಾಮಾಣಿಕತೆಯಿಂದ ನಡೆಸಿ ವಲಯಕ್ಕೆ ಉತ್ತಮ ಹೆಸರು ತಂದಿದ್ದಾರೆ ಎಂದು ಶ್ಲಾಘಿಸಿದರು. ಅವರು ಮುಂಬಡ್ತಿ ಹೊಂದಿ ಬೇರೆ ಊರಿಗೆ ವರ್ಗಾವಣೆಗೊಂಡು ತೆರಳುತ್ತಿದ್ದಾರೆ ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ಈ ವೇಳೆ ಆನಂದ ಡಿ.ವಿ ಅವರಿಗೆ ಶಾಲು ಹೊದಿಸಿ, ಪೇಟ ತೊಡಿಸಿ, ಫಲಪುಷ್ಪಗಳನ್ನು ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕಳೆದ 18 ವರ್ಷಗಳಿಂದ ವಿವಿಧ ಸ್ಥಳಗಳಲ್ಲಿ ಸೇವೆ ಸಲ್ಲಿಸಿರುವುದಾಗಿ ತಿಳಿಸಿದರು. ಕಡಬ ತಾಲೂಕಿನಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ವರ್ಗಾವಣೆ ವೃತ್ತಿಜೀವನದಲ್ಲಿ ಸಹಜ ಪ್ರಕ್ರಿಯೆಯಾಗಿದೆ ಎಂದರು. ನೆಲ್ಯಾಡಿ ವಲಯದಲ್ಲಿ ಕಾರ್ಯನಿರ್ವಹಿಸಿದ ಅನುಭವ ಜೀವನದ ಅವಿಸ್ಮರಣೀಯ ಕ್ಷಣವಾಗಿದೆ ಎಂದು ಹೇಳಿದ ಅವರು, ಐದು ಭಜನಾ ಕಮ್ಮಟಗಳು ಹಾಗೂ ಮಧ್ಯವರ್ಜನ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವುದಾಗಿ ವಿವರಿಸಿದರು. ಈ ಎಲ್ಲಾ ಸಾಧನೆಗಳಿಗೆ ವಲಯದ ಎಲ್ಲಾ ಒಕ್ಕೂಟಗಳ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಹಾಗೂ ಊರವರ ಸಹಕಾರವೇ ಕಾರಣ ಎಂದು ತಿಳಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ನೆಲ್ಯಾಡಿ ವಲಯ ಒಕ್ಕೂಟದ ಅಧ್ಯಕ್ಷ ಕುಶಾಲಪ್ಪ ಗೌಡ, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ರವಿಚಂದ್ರ ಹೊಸವಕ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೇವಸ್ಥಾನ ಆಡಳಿತ ಸಮಿತಿಯ ಕಾರ್ಯದರ್ಶಿ ರಾಕೇಶ್, ವಲಯದ ಒಕ್ಕೂಟಗಳ ಅಧ್ಯಕ್ಷರಾದ ಸೆಬಾಸ್ಟಿಯನ್, ಬಾಲಕೃಷ್ಣ ಗೌಡ, ಜೋನ್ ಮೊಂತೇರೋ, ಲೋಕಯ್ಯ ಗೌಡ, ಮಾರ್ಸೆಲ್ ಡಿ’ಸೋಜ, ಸುಮಿತ್ರಾ, ಸುಕುಮಾರ್, ಸಣ್ಣಿ, ಚೆನ್ನಪ್ಪ ಗೌಡ, ಸೇವಾ ಪ್ರತಿನಿಧಿ ಸುಮನ ಎಂ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಊರಿನ ಗಣ್ಯರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

ಸೇವಾ ಪ್ರತಿನಿಧಿಗಳಾದ ನಮಿತಾ ಎಸ್ ಶೆಟ್ಟಿ ಸ್ವಾಗತಿಸಿದರು. ಹೇಮಾವತಿ ಜೆ ಕಾರ್ಯಕ್ರಮ ನಿರೂಪಿಸಿದರು. ಪ್ರಿಯಲತಾ ವಂದಿಸಿದರು.

 

Leave a Reply

error: Content is protected !!