ಕೊಕ್ಕಡ: ಹಿಟ್ ಅಂಡ್ ರನ್: ಬೈಕ್‌ಗೆ ಕಾರು ಡಿಕ್ಕಿ – ಸವಾರ ಗಂಭೀರ ಗಾಯ, ಆಂಬುಲೆನ್ಸ್ ವಿಳಂಬಕ್ಕೆ ಆಕ್ರೋಶ

ಶೇರ್ ಮಾಡಿ

 

ಕೊಕ್ಕಡ: ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಎಂಬಲ್ಲಿ ಮಂಗಳವಾರ ಬೆಳಗ್ಗೆ ಚಲಿಸುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿದೆ.

ಕೊಕ್ಕಡದಿಂದ ಉಪ್ಪಿನಂಗಡಿಗೆ ಗೋಳಿತೊಟ್ಟು ಮಾರ್ಗವಾಗಿ ತೆರಳುತ್ತಿದ್ದ ಕೊಕ್ಕಡ ಕೆನರಾ ಬ್ಯಾಂಕ್‌ನ ಚಿನ್ನ ಪರೀಕ್ಷಕ, ಬಲ್ಯ ನಿವಾಸಿ ಗಣೇಶ್ ಆಚಾರ್ಯ ಅವರು ಚಲಿಸುತ್ತಿದ್ದ ಬೈಕ್‌ಗೆ ಉಪ್ಪಾರಪಳಿಕೆ ಬಳಿ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ತಕ್ಷಣವೇ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆಯಿಂದ ಗಣೇಶ್ ಆಚಾರ್ಯ ಅವರು ಗಾಯಗೊಂಡಿದ್ದು, ಸ್ಥಳದಲ್ಲಿದ್ದ ಸ್ಥಳೀಯರು ತಕ್ಷಣ ಅವರನ್ನು ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಇದೇ ವೇಳೆ ಗಾಯಾಳುವನ್ನು ತುರ್ತು ಚಿಕಿತ್ಸೆಗೆ ಕೊಂಡೊಯ್ಯಲು ನಿಯೋಜಿಸಲಾಗಿದ್ದ ಕೊಕ್ಕಡ ಸರಕಾರಿ ಆಸ್ಪತ್ರೆಯ 108 ಆಂಬುಲೆನ್ಸ್ ರಿಪೇರಿಗಾಗಿ ಕಳೆದ ಮೂರು ದಿನಗಳ ಹಿಂದೆ ಗ್ಯಾರೇಜ್‌ಗೆ ಕೊಂಡೊಯ್ಯಲಾಗಿದ್ದರಿಂದ, ಆಂಬುಲೆನ್ಸ್ ಲಭ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಯಿತು. ಇದರ ಪರಿಣಾಮವಾಗಿ ಗಾಯಾಳು ಸುಮಾರು ಅರ್ಧ ಗಂಟೆಗಿಂತ ಹೆಚ್ಚು ಸಮಯ ಆಸ್ಪತ್ರೆಯಲ್ಲಿ ಕಾಯುವಂತಾಗಿ, ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಯಿತು. ಕೆಲಕಾಲ ಆಸ್ಪತ್ರೆ ಎದುರು ಆಕ್ರೋಶವೂ ವ್ಯಕ್ತಗೊಂಡಿತು. ನಂತರ ಶಿರಾಡಿಯಿಂದ 108 ಆಂಬುಲೆನ್ಸ್ ತರಿಸಿ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ.

 

Leave a Reply

error: Content is protected !!