





ನೆಲ್ಯಾಡಿ: ಜೇಸಿಐ ನೆಲ್ಯಾಡಿ ವತಿಯಿಂದ ಕಾರ್ಮಿಕ ದಿನಾಚರಣೆಯ ಅಂಗವಾಗಿ ಕಟ್ಟಡ ಕಾರ್ಮಿಕ ಪುರುಷೋತ್ತಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಪುರುಷೋತ್ತಮ ಶೆಟ್ಟಿ ಅವರು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕಳೆದ 29 ವರ್ಷಗಳಿಂದ ಮನೆ ನಿರ್ಮಾಣ, ದೈವ-ದೇವರ ಗುಡಿ ಗೋಪುರ, ಭಜನಾ ಮಂದಿರ ಹಾಗೂ ಸಿಮೆಂಟ್ ಡಿಸೈನ್ ಕೆಲಸಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತಾ ತಮ್ಮ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅವರ ಪರಿಶ್ರಮ, ನಿಷ್ಠೆ ಹಾಗೂ ಸಮಾಜದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಗೌರವಿಸಿ ಈ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ನೆಲ್ಯಾಡಿ ಅಧ್ಯಕ್ಷೆ ಪ್ರವೀಣಿ ಸುಧಾಕರ್ ಶೆಟ್ಟಿ ವಹಿಸಿದರು. ಸಂತ ಜಾರ್ಜ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜೇಸಿ ಅಬ್ರಹಾಂ ವರ್ಗೀಸ್, ಜೇಸಿಐ ವಲಯ 15ರ ವಲಯ ಯೋಜನಾಧಿಕಾರಿ ಪ್ರದೀಪ್ ಕುಮಾರ್ ರೈ, ಜೇಸಿಐ ನಿಕಟ ಪೂರ್ವಾಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಮಹಿಳಾ ಜೆಸಿ ಅಧ್ಯಕ್ಷೆ ನವ್ಯ ಪ್ರಸಾದ್, ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ, ಕಾರ್ಯಕ್ರಮದ ಯೋಜನಾ ನಿರ್ದೇಶಕರಾದ ಪ್ರಶಾಂತ್ ಹಾಗೂ ಹರೀಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೇಸಿಐ ಸದಸ್ಯೆ ದೀಪಿಕಾ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಜೇಸಿಐ ಸದಸ್ಯೆ ನಮಿತಾ ಅಮ್ಮುಂಜ ಜೇಸಿ ವಾಣಿ ವಾಚಿಸಿದರು. ಜೇಸಿಐ ಸದಸ್ಯೆ ರೇಷ್ಮಾ ಸನ್ಮಾನಿತರ ಪರಿಚಯವನ್ನು ವಾಚಿಸಿದರು. ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ ವಂದಿಸಿದರು.



