





ನೆಲ್ಯಾಡಿ: ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆ ಅನಿತೋಟತ್ತಿಲ್ ನಿವಾಸಿ, ಆಟೋ ರಿಕ್ಷಾ ಚಾಲಕ ಹರಿದಾಸನ್(63) ಅವರು ಸಾಲದ ಒತ್ತಡದಿಂದ ಮನನೊಂದು ಮನೆಯ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಮೃತ ಹರಿದಾಸನ್ ಅವರು ಆಟೋ ರಿಕ್ಷಾ ಚಾಲಕರಾಗಿದ್ದು, ಆಟೋ ಖರೀದಿ ಹಾಗೂ ಮನೆ ನಿರ್ಮಾಣಕ್ಕಾಗಿ ಬ್ಯಾಂಕ್ನಿಂದ ಸಾಲ ಪಡೆದಿದ್ದರು. ಸಾಲದ ಕಂತುಗಳನ್ನು ತೀರಿಸಲು ಕಷ್ಟವಾಗುತ್ತಿದೆ ಎಂದು ಅವರು ಆಗಾಗ ಪತ್ನಿ ಬಳಿ ಹೇಳಿಕೊಂಡು ಮನೋವ್ಯಥೆ ವ್ಯಕ್ತಪಡಿಸುತ್ತಿದ್ದರು ಎನ್ನಲಾಗಿದೆ.
ಭಾನುವಾರ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದ ಹರಿದಾಸನ್ ಅವರು, ಸೋಮವಾರ ಬೆಳಿಗ್ಗೆ ಮನೆಯಲ್ಲಿ ಕಾಣಿಸದಿದ್ದರಿಂದ ಕುಟುಂಬಸ್ಥರು ಹುಡುಕಾಟ ನಡೆಸಿದರು. ಈ ವೇಳೆ ಮನೆಯಿಂದ ಸುಮಾರು 20 ಮೀಟರ್ ದೂರದಲ್ಲಿರುವ ಸಂಪಿಗೆ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ.
ಮೃತ ಹರಿದಾಸ ಅವರು ಕಳೆದ ಸುಮಾರು ಹತ್ತು ವರ್ಷಗಳಿಂದ ಗುಂಡ್ಯ–ಅಡ್ಡಹೊಳೆ ಭಾಗಗಳಲ್ಲಿ ಆಟೋ ಬಾಡಿಗೆ ನಡೆಸುತ್ತಿದ್ದರು.
ಮೃತರು ಪತ್ನಿ ಮತ್ತು ಸೊಸೆಯೊಂದಿಗೆ ವಾಸವಾಗಿದ್ದು, ಇಬ್ಬರು ಪುತ್ರರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.
ಮೃತ ಪತ್ನಿ ಸಿಂಧೂ ಅವರು ನೀಡಿದ ದೂರಿನ ಮೇರೆಗೆ ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



