





ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ) ಕಡಬ ಇದರ ಅಂಗ ಸಂಸ್ಥೆಯಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್(ರಿ) ಕಡಬ ತಾಲೂಕು ಪದಾಧಿಕಾರಿಗಳ ಸಭೆಯು ಮೇ.7ರಂದು ಕಡಬ ಶ್ರೀ ಜಯದುರ್ಗಾ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಉದ್ಘಾಟಿಸಿ ಮಾತನಾಡಿ, “ಕಡಬ ಜನಜಾಗೃತಿ ವೇದಿಕೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಅಭಿನಂದನೀಯ. ಜನಜಾಗೃತಿಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದಾಗ ದೇವರ ಅನುಗ್ರಹವೂ ಲಭಿಸುತ್ತದೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಬಾಬು ಎ.ನಾಯ್ಕ ಮಾತನಾಡಿ, “ಸ್ವಾಸ್ಥ್ಯ ಸಂಕಲ್ಪ ಸೇರಿದಂತೆ ಜನಜಾಗೃತಿ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸುವ ಕಾರ್ಯವನ್ನು ವೇದಿಕೆ ಕೈಗೊಳ್ಳಬೇಕು” ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಮಹೇಶ್ ಕೆ. ಸವಣೂರು ಮಾತನಾಡಿ, ತಾಲೂಕಿನ ಎಲ್ಲಾ ಸದಸ್ಯರ ಸಹಕಾರ, ಯೋಜನೆ ಹಾಗೂ ಅಧಿಕಾರಿಗಳ ನಿರಂತರ ಮಾರ್ಗದರ್ಶನದಿಂದ ಜನಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು ಎಂದು ತಿಳಿಸಿದರು.
2026-27ನೇ ಸಾಲಿನ ಕ್ರಿಯಾ ಯೋಜನೆ ಕುರಿತು ಜನಜಾಗೃತಿ ವೇದಿಕೆಯ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮಾಹಿತಿ ನೀಡಿದರು. ಸಭೆಯಲ್ಲಿ ತಾಲೂಕಿನ 20 ಶಾಲಾ-ಕಾಲೇಜುಗಳಲ್ಲಿ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಮದ್ಯವರ್ಜನ ಶಿಬಿರ ಹಾಗೂ ಕ್ರೀಡಾಕೂಟಗಳನ್ನು ಆಯೋಜಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಇದೇ ಸಂದರ್ಭದಲ್ಲಿ 2027-28ನೇ ಸಾಲಿನ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಇಂದುಶೇಖರ ಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಪಿಯುಸಿ ಪರೀಕ್ಷೆಯಲ್ಲಿ ಶೇ.96 ಅಂಕ ಗಳಿಸಿರುವ ಶಿವಪ್ರಸಾದ್ ರೈ ಮೈಲೇರಿ ಅವರ ಪುತ್ರಿ ಪೂರ್ವಿ ರೈ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ. ಸವಣೂರು ಹಾಗೂ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿಯವರನ್ನು ತಾಲೂಕು ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ತಾಲೂಕು ಅಧ್ಯಕ್ಷ ಮಹೇಶ್ ಕೆ. ಸವಣೂರು ಅವರು ತಾಲೂಕು ಉಪಾಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಜಿಲ್ಲಾ ನಿರ್ದೇಶಕ ಬಾಬು ಎ. ನಾಯ್ಕ, ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಗಣೇಶ್ ಆಚಾರ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಅವರನ್ನು ಅಭಿನಂದಿಸಿದರು.
ಸಭೆಯಲ್ಲಿ ತಾಲೂಕು ಉಪಾಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಜಯಾನಂದ ಬಂಟ್ರಿಯಾಲ್, ಗಣೇಶ್ ಕೈಕುರೆ, ಶಿವಪ್ರಸಾದ್ ರೈ ಮೈಲೇರಿ, ಕಡಬ ವಲಯಾಧ್ಯಕ್ಷ ಕರುಣಾಕರ ಗೋಗಟೆ, ತಾಲೂಕು ಜನಜಾಗೃತಿ ವೇದಿಕೆ ಸದಸ್ಯರಾದ ವರ್ಗೀಸ್, ಗಿರೀಶಂಕರ ಸುಲಾಯ, ಪಿ.ವೈ. ಕುಸುಮ, ಸರೋಜಿನಿ ಆಚಾರ್ಯ, ಮಹಮದ್ ಅಲಿ, ಶಾರದಾ, ಮಮತಾ ರೈ, ಮೀನಾಕ್ಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಡಬ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ವಾರ್ಷಿಕ ವರದಿ ವಾಚಿಸಿದರು. ಕಡಬ ವಲಯ ಮೇಲ್ವಿಚಾರಕ ವಿಜೇಶ್ ಜೈನ್ ಸ್ವಾಗತಿಸಿದರು. ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.



