





ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹೋಬಳಿಯ ಪೇಟೆ ರಸ್ತೆಯ ದುಸ್ಥಿತಿ ಮತ್ತೆ ಜನರ ಅಸಹನೆಗೆ ಕಾರಣವಾಗಿದೆ. ಹೂಂಡ ಗುಂಡಿಗಳಿಂದ ಸಂಚಾರಕ್ಕೆ ಅಸಾಧ್ಯವಾಗಿರುವ ಈ ರಸ್ತೆ, ಅಪಘಾತಗಳಿಗೆ ತಾಣವಾಗಿ ಮಾರ್ಪಟ್ಟಿದ್ದು ಸಾರ್ವಜನಿಕರ ದೈನಂದಿನ ಬದುಕನ್ನೇ ಸಂಕಟಕರಗೊಳಿಸಿದೆ.
ಕೊಕ್ಕಡ ನಾಡಕಚೇರಿ, ಗ್ರಾಮ ಪಂಚಾಯಿತಿ, ಕೃಷಿ ಇಲಾಖೆ, ಸರಕಾರಿ ಆಸ್ಪತ್ರೆ ಹಾಗೂ ದೇವಸ್ಥಾನ, ಬ್ಯಾಂಕುಗಳಿಗೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ಜಿಪಂ ರಸ್ತೆ, 27 ಗ್ರಾಮಗಳಿಗೆ ಕೇಂದ್ರ ಬಿಂದುವಾಗಿದ್ದು ರಾಷ್ಟ್ರೀಯ ಹೆದ್ದಾರಿಯನ್ನೂ ಸಂಪರ್ಕಿಸುತ್ತದೆ. ಆದರೂ, ವರ್ಷಗಳ ಕಾಲ ಯಾವುದೇ ಶಾಶ್ವತ ದುರಸ್ತಿ ಕಾರ್ಯ ನಡೆಯದೇ ರಸ್ತೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಹಲವು ಬಾರಿ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ಮತ್ತು ಸಂಘಟನೆಗಳು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರಕದೆ ಸಾರ್ವಜನಿಕರಲ್ಲಿ ಆಕ್ರೋಶ ದಿನೇ ದಿನೇ ಹೆಚ್ಚುತ್ತಿದೆ. ಮಳೆಗಾಲದಲ್ಲಿ ಹೊಂಡಗಳಲ್ಲಿ ನೀರು ತುಂಬಿ ಅವು ಗೋಚರಿಸದ ಕಾರಣ ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ತುರ್ತು ಸೇವೆಗಳಿಗೂ ಈ ರಸ್ತೆ ದೊಡ್ಡ ತೊಂದರೆಯಾಗಿ ಪರಿಣಮಿಸಿದೆ.
ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಸ್ಥಳೀಯ ಯುವಕರು ಚೇತನ್ ಟಿ.ಎಲ್. ಮತ್ತು ರೂಪೇಶ್ ಕುಮಾರ್ ನೇತೃತ್ವದಲ್ಲಿ ತಮ್ಮದೇ ಖರ್ಚಿನಲ್ಲಿ ಹಿಂದೆ ಕಾಂಕ್ರೀಟ್ ಹಾಕಿ ತಾತ್ಕಾಲಿಕ ಪರಿಹಾರ ಒದಗಿಸಿದ್ದರು. ಆದರೆ ವಾಹನಗಳ ಓಡಾಟ ಮತ್ತು ಮಳೆಯ ನೀರಿನ ಪರಿಣಾಮದಿಂದ ಆ ಕಾಂಕ್ರೀಟ್ ಕಿತ್ತು ಹೋಗಿ ಮತ್ತೆ ದೊಡ್ಡ ಹೊಂಡಗಳು ನಿರ್ಮಾಣಗೊಂಡಿವೆ.
ಈ ಹಿನ್ನೆಲೆಗಳಲ್ಲಿ ಕೊಕ್ಕಡದ ಆಟೋ ಚಾಲಕ ಮಾಲಕರಾದ ಗಣೇಶ್ ಮಡ್ಯಲಗುಂಡಿ, ದಾಮೋದರ ಮಡ್ಯಲಗುಂಡಿ, ಧನಂಜಯ ಕಾಪಿನಬಾಗಿಲು, ದಾಮೋದರ ಕಾಪಿನಬಾಗಿಲು, ಸಚಿನ್ ಬಜ, ಹರ್ಷೀತ್, ಶುಶಂತ್, ಸಚಿನ್ ಟಿ.ಎಲ್, ಜಿತೇಶ್ ಆರ್.ಸಿ, ವಿನ್ಸೆಂಟ್, ನಾಗೇಶ್, ಉಮೇಶ್, ಜಗದೀಶ್ ಹಾಗೂ ವಿನ್ಸೆಂಟ್ ಮಿನೆಜಸ್ ಒಟ್ಟಾಗಿ ತಮ್ಮ ದುಡಿಮೆಯ ಹಣವನ್ನು ಸೇರಿಸಿ ಸೋಮವಾರದಂದು ಹೊಂಡಗಳನ್ನು ಮುಚ್ಚುವ ಕಾರ್ಯ ಕೈಗೊಂಡಿದ್ದಾರೆ. ಇದರಿಂದ ತಾತ್ಕಾಲಿಕವಾಗಿ ವಾಹನ ಸಂಚಾರ ಸುಗಮವಾಗಿದ್ದರೂ, ಇದು ಶಾಶ್ವತ ಪರಿಹಾರವಲ್ಲ ಎಂಬುದು ಸ್ಥಳೀಯರ ಆತಂಕವಾಗಿದೆ.



