





ಸುಳ್ಯ: ಬೆಂಗಳೂರಿನಿಂದ ಸುಳ್ಯ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ನ ಚಾಲಕನಿಗೆ ಪ್ರಯಾಣ ಮಧ್ಯೆ ಹೃದಯಾಘಾತವಾಗಿ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಮುಂಜಾನೆ ಮಡಿಕೇರಿ ಸಮೀಪದ ಕಾಟಿಗೇರಿಯಲ್ಲಿ ನಡೆದಿದೆ.
ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿ, ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತ ಚಾಲಕನನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ.
ಖಾಸಗಿ ಬಸ್ ಗುರುವಾರ ರಾತ್ರಿ ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯ ಕಡೆಗೆ ಹೊರಟಿತ್ತು. ಶುಕ್ರವಾರ ಮುಂಜಾನೆ ಮಡಿಕೇರಿ ದಾಟಿ ಕಾಟಿಗೇರಿ ಭಾಗಕ್ಕೆ ಬರುತ್ತಿದ್ದ ವೇಳೆ ತಿರುವಿನ ಸಮೀಪ ಚಾಲಕ ಶಿವಕುಮಾರ್ ಅವರಿಗೆ ಏಕಾಏಕಿ ಹೃದಯಾಘಾತವಾಗಿದೆ. ಹೃದಯಾಘಾತವಾದರೂ ಕೂಡ ಬಸ್‌ನ್ನು ನಿಯಂತ್ರಿಸಲು ಶಿವಕುಮಾರ್ ಕೊನೆಯ ಕ್ಷಣದವರೆಗೂ ಯತ್ನಿಸಿದ್ದಾರೆ ಎನ್ನಲಾಗಿದೆ. ಬಸ್ ನಿಯಂತ್ರಣ ತಪ್ಪುತ್ತಿರುವುದನ್ನು ಅರಿತ ಅವರು ವಾಹನವನ್ನು ರಸ್ತೆ ಬದಿಗೆ ಕೊಂಡೊಯ್ದು ಬರೆಗೆ ಗುದ್ದಿಸಿ ನಿಲ್ಲಿಸಿದ ಪರಿಣಾಮ ದೊಡ್ಡ ದುರಂತ ತಪ್ಪಿದೆ. ಆದರೆ, ಚಾಲಕ ಕುಳಿತಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆಯ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಭಾರೀ ಆತಂಕಕ್ಕೊಳಗಾದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.



