ಕೊಕ್ಕಡ ಸರ್ಕಲ್ ಸಿಸಿ ಕ್ಯಾಮೆರಾ ಸಂಪೂರ್ಣ ಸ್ಥಗಿತ

ಶೇರ್ ಮಾಡಿ

ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಗೆ ಸಂಕಷ್ಟ | ದುರಸ್ತಿಗೆ ಸಾರ್ವಜನಿಕರ ಒತ್ತಾಯ

 

ಕೊಕ್ಕಡ ಸರ್ಕಲ್ ಸಿಸಿ ಕ್ಯಾಮೆರಾ ಸಂಪೂರ್ಣ ಸ್ಥಗಿತ

ಕೊಕ್ಕಡ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಹಿಡಿಯುವ ಹಾಗೂ ಅಪರಾಧಿಗಳನ್ನು ಶೀಘ್ರ ಪತ್ತೆ ಹಚ್ಚುವ ಉದ್ದೇಶದಿಂದ ಧರ್ಮಸ್ಥಳ ಪೊಲೀಸ್ ಠಾಣೆ ವತಿಯಿಂದ ಕೊಕ್ಕಡ ಸರ್ಕಲ್‌ನಲ್ಲಿ ಅಳವಡಿಸಲಾಗಿದ್ದ ಆ ಅತ್ಯಾಧುನಿಕ ಸಿಸಿ ಕ್ಯಾಮೆರಾಗಳ ಕಾರ್ಯ ಸ್ಥಗಿತಗೊಂಡಿದ್ದು, ನಿರುಪಯುಕ್ತವಾಗಿವೆ.

ಎರಡು ವರ್ಷಗಳ ಹಿಂದೆ ಧರ್ಮಸ್ಥಳ ಪೊಲೀಸ್ ಠಾಣೆಯಿಂದ ಕೊಕ್ಕಡ ಸರ್ಕಲ್‌ನಲ್ಲಿ ಮೂರು ಅತ್ಯಾಧುನಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆರಂಭದಲ್ಲಿ ಕೆಲವೇ ದಿನಗಳು ಕಾರ್ಯ ನಿರ್ವಹಿ ಸಿದ್ದ ಈ ಕ್ಯಾಮೆರಾಗಳು ಬಳಿಕ ಹಾಳಾಗಿ, ಈಗ ಬೀದಿ ದೀಪದ ಕಂಬಗಳಲ್ಲಿ ಕೇವಲ ತೋರಿಕೆಗಾಗಿ ನೇತಾಡುತ್ತಿದೆ.

ಧರ್ಮಸ್ಥಳ, ಸುಬ್ರಹ್ಮಣ್ಯ, ಪುತ್ತೂರು, ಕಡಬ ಹಾಗೂ ಬೆಳ್ತಂಗಡಿ ತಾಲೂಕುಗಳನ್ನು ಸಂಪರ್ಕಿಸುವ ಪ್ರಮುಖ ಕೇಂದ್ರವಾಗಿರುವ ಕೊಕ್ಕಡ ಸರ್ಕಲ್‌ ನಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಸಂಜೆ ವೇಳೆಗೆ ಜನಜಂಗುಳಿ ಹೆಚ್ಚಿರುತ್ತದೆ. ಸಣ್ಣಪುಟ್ಟ ಗಲಾಟೆ, ಕಳ್ಳತನ, ಅಪರಾಧ ಚಟುವಟಿಕೆಗಳು ಹೆಚ್ಚಾಗಿ ನಡೆಯುವ ಪ್ರದೇಶವಾಗಿರುವುದರಿಂದಲೇ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಇಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿತ್ತು.

ಸ್ಥಳೀಯರ ಪ್ರಕಾರ, ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಅಪರಾಧ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿದ್ದವು. ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಇಡುವುದಕ್ಕೂ, ವಾಹನ ಗಳ ಚಲನವಲನ ಪತ್ತೆ ಹಚ್ಚುವುದಕ್ಕೂ ಕ್ಯಾಮೆರಾಗಳು ಅತ್ಯಂತ ಸಹಕಾರಿಯಾಗಿದ್ದವು. ಆದರೆ ಹಾಳಾದ ಬಳಿಕ ಅವುಗಳನ್ನು ದುರಸ್ತಿ ಮಾಡುವ ಗೋಜಿಗೆ ಇಲಾಖೆ ಹೋಗದೇ ನಿರ್ಲಕ್ಷ್ಯ ವಹಿಸಿರುವುದು ಈಗ ಅಪರಾಧ ಕೃತ್ಯ ನಡೆಸುವವರಿಗೆ ವರದಾನವಾದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇತ್ತೀಚೆಗೆ ಕೊಕ್ಕಡ ಸರ್ಕಲ್ ಸಮೀಪ ನಿಲ್ಲಿಸಿದ್ದ ಬೈಕ್ ಕಳವಾಗಿದ್ದು, ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿದ್ದರೆ ಆರೋಪಿಗಳನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿತ್ತು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಹಾಳಾಗಿರುವ ಸಿಸಿ ಕ್ಯಾಮೆರಾಗಳನ್ನು ತಕ್ಷಣ ದುರಸ್ತಿ ಗೊಳಿಸಬೇಕು. ಇದರಿಂದ ಅಪರಾಧ ಪ್ರಕರಣಗಳನ್ನು ಅತಿ ಶೀಘ್ರ ಪತ್ತೆ ಹಚ್ಚಲು ಹಾಗೂ ಸಾರ್ವಜನಿಕರಲ್ಲಿ ಭದ್ರತಾ ಭಾವನೆ ಮೂಡಿಸಲು ಸಹಕಾರಿಯಾಗಲಿದೆ ಎಂಬುದು ಸಾರ್ವಜನಿಕರ ಒತ್ತಾಯ.

 

Leave a Reply

error: Content is protected !!