






ಬೆಳ್ತಂಗಡಿ : ಹಳೆ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅತ್ತೆಯ ಮನೆಗೆ ನುಗ್ಗಿ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಯತ್ನಿಸಿದ ಆರೋಪದ ಮೇಲೆ ಆಳಿಯನನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹೊಸಂಗಡಿ ನಿವಾಸಿ ಪ್ರಸನ್ನ ಕುಮಾರ್ (33) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ 54 ವರ್ಷದ ಮಹಿಳೆ ಮೂಡಬಿದ್ರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣದ ವಿವರ:ಆರೋಪಿ ಪ್ರಸನ್ನ ಕುಮಾರ್ ದೂರುದಾರ ಸುಜಾತ ಅವರ ಗಂಡನ ತಮ್ಮನಾಗಿದ್ದು, ಸುಮಾರು ಮೂರುರಿಂದ ನಾಲ್ಕು ವರ್ಷಗಳ ಹಿಂದೆ ತನ್ನ ಸಂಬಂಧಿ ಸತೀಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ. ಈ ವಿಚಾರದಲ್ಲಿ “ಜೀವನಪರ್ಯಂತ ಜೈಲಿನಲ್ಲಿ ಕೊಳೆಯಬೇಕು” ಎಂದು ಮನೆಯವರು ಹೇಳುತ್ತಿದ್ದ ವಿಚಾರವನ್ನು ಮನಸ್ಸಿಗೆ ತೆಗೆದುಕೊಂಡು ಆರೋಪಿ ದ್ವೇಷ ಬೆಳೆಸಿಕೊಂಡಿದ್ದ ಎನ್ನಲಾಗಿದೆ.
ಇದೇ ಕಾರಣಕ್ಕೆ ದೂರುದಾರರ ತಾಯಿಯೊಂದಿಗೆ ಆಗಾಗ ಮಾತಿನ ಚಕಮಕಿ ನಡೆಸುತ್ತಿದ್ದ ಆರೋಪಿಯು, ಕೊಲೆ ಬೆದರಿಕೆ ಕೂಡ ಹಾಕುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೇ 19ರಂದು ಮಧ್ಯಾಹ್ನ ಸುಮಾರು 12.45ರಿಂದ 1 ಗಂಟೆಯ ಅವಧಿಯಲ್ಲಿ ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ದೆಲೋಡಿ ಮನೆಗೆ ನುಗ್ಗಿದ ಆರೋಪಿ, ಉದ್ದನೆಯ ಕತ್ತಿಯನ್ನು ಹಿಡಿದುಕೊಂಡು ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ “ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ತಲೆ, ಮುಖ, ಕೈ ಹಾಗೂ ಕಾಲುಗಳಿಗೆ ಕತ್ತಿಯಿಂದ ಕಡಿದು ತೀವ್ರ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ಮಹಿಳೆಯ ಪುತ್ರಿ ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.
ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ. ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಕ್ಷಯ್ ಡವಗಿ ಹಾಗೂ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿತು. ಖಚಿತ ಮಾಹಿತಿ ಮೇರೆಗೆ ಮೇ 20ರಂದು ವೇಣೂರಿನ ಕುರ್ಲೊಟ್ಟು ಜಂಕ್ಷನ್ನಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


