






ನೆಲ್ಯಾಡಿ: ಜೀವ ಉಳಿಸುವ ಮಹತ್ವದ ಸೇವೆಯಲ್ಲಿ ನಿರಂತರ ತೊಡಗಿರುವ ಆಂಬುಲೆನ್ಸ್ ಚಾಲಕರನ್ನು ಗೌರವಿಸುವ ನಿಟ್ಟಿನಲ್ಲಿ ನೆಲ್ಯಾಡಿಯ ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರದ ಎಸ್.ಎಂ.ವೈ.ಎಂ ವತಿಯಿಂದ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಿತು. ರಕ್ತದಾನ ಶಿಬಿರದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ನಾಡಿನ ಜೀವ ರಕ್ಷಕರಾದ ಆಂಬುಲೆನ್ಸ್ ಚಾಲಕರನ್ನು ಅಭಿನಂದಿಸಿ ಗೌರವಿಸಲಾಯಿತು.
ಆಂಬುಲೆನ್ಸ್ ಚಾಲಕರಾದ ಪಿ.ಮೊಹಮ್ಮದ್ ಮಸೂದ್, ಅಬ್ದುಲ್ ಸಮದ್ ಹಾಗೂ ಪ್ರಜ್ವಲ್ ಪಿ.ಜೆ. ಅವರನ್ನು ಸನ್ಮಾನಿಸಿ ಮಾತನಾಡಿದ ವಂ.ಫಾ. ಶಾಜಿ ಮಾತ್ಯು, “ಸಾವು–ಬದುಕಿನ ನಡುವಿನ ಅತಿ ಸಂಕಷ್ಟದ ಕ್ಷಣಗಳಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸುವ ಆಂಬುಲೆನ್ಸ್ ಚಾಲಕರ ಸೇವೆ ಅಮೂಲ್ಯವಾದದ್ದು. ಸಮಾಜವು ಅವರ ತ್ಯಾಗ ಮತ್ತು ಸೇವೆಯನ್ನು ಗುರುತಿಸಿ ಗೌರವಿಸುವುದು ಅತ್ಯವಶ್ಯಕ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತೃವೇದಿಕೆ ಅಧ್ಯಕ್ಷೆ ಸುಜಾ ಜೇಮ್ಸ್, ಸಿಸ್ಟರ್ ಲಿಸ್ ಮಾತ್ಯು, ಯುವಜನ ಸಂಘದ ದಿಶಾ ಹಾಗೂ ಜಿತು, ಕ್ರೆಡಿಟ್ ಯೂನಿಯನ್‌ನ ಶಿಬು, ವಿನ್ಸೆಂಟ್ ಡಿ ಪೌಲ್ ಸಂಘದ ಸಣ್ಣಿ ಉಪಸ್ಥಿತರಿದ್ದರು. ಲೆಫ್ಟಿನೆಂಟ್ ಜನರಲ್ ಜಿನೋಜ್ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಬೆರಿಲ್ ಕಾರ್ಯಕ್ರಮ ನಿರೂಪಿಸಿದರು.


