ಕಾಪರ್ ಸಲ್ಫೇಟ್ ಬಳಸಿ ಮೀನು ಹಿಡಿಯಲು ಯತ್ನ; ನದಿ ತೀರದಲ್ಲಿ ಸತ್ತು ತೇಲಿದ ಮೀನುಗಳು – ಸಾರ್ವಜನಿಕರ ಆಕ್ರೋಶ







ಶಿಶಿಲ: ಮತ್ಸ್ಯತೀರ್ಥ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಶಿಶಿಲೇಶ್ವರ ದೇವಸ್ಥಾನದ ಸಮೀಪದ ಬರ್ಗುಳ ಕಿಂಡಿ ಆಣೆಕಟ್ಟು ಪ್ರದೇಶದಲ್ಲಿ ಕಿಡಿಗೇಡಿಗಳು ಕಾಪರ್ ಸಲ್ಫೇಟ್ (ಮೈಲ್ ಸುತ್ತು) ಬಳಸಿ ಅಕ್ರಮವಾಗಿ ಮೀನು ಹಿಡಿಯಲು ಯತ್ನಿಸಿದ ಪರಿಣಾಮ ಸಾವಿರಾರು ಮೀನುಗಳು ಸಾವನ್ನಪ್ಪಿರುವ ದುರ್ಘಟನೆ ಬೆಳಕಿಗೆ ಬಂದಿದೆ.
ಶುಕ್ರವಾರ ರಾತ್ರಿ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಶನಿವಾರದಂದು ಸ್ಥಳೀಯರು ನದಿ ತೀರದಲ್ಲಿ ಸಂಚರಿಸುವ ವೇಳೆ ನೀರಿನಲ್ಲಿ ಸತ್ತು ತೇಲುತ್ತಿದ್ದ ಹಾಗೂ ದಡದಲ್ಲಿ ಬಿದ್ದಿದ್ದ ಮೀನುಗಳನ್ನು ಕಂಡು ಬೆಚ್ಚಿಬಿದ್ದರು. ವಿಷಕಾರಿ ರಾಸಾಯನಿಕದ ಪರಿಣಾಮವಾಗಿ ಸಣ್ಣಪುಟ್ಟ ಮೀನುಗಳು ಸೇರಿದಂತೆ ಅಪಾರ ಪ್ರಮಾಣದ ಜಲಚರಗಳು ಸಾವನ್ನಪ್ಪಿದ್ದು, ಮೃತ ಮೀನುಗಳನ್ನು ಅಲ್ಲಿಯೇ ಬಿಟ್ಟು ಹೋಗಿರುವುದು ಕಂಡುಬಂದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಪ್ರಮುಖರಾದ ಕರುಣಾಕರ ಶಿಶಿಲ, ಮನೋಜ್, ಉಮೇಶ್, ಲೋಕೇಶ್ ಅಡ್ಡಹಳ್ಳ ಹಾಗೂ ಪುರುಷೋತ್ತಮ್ ಅಡ್ಡಹಳ್ಳ ಅವರು ಪರಿಸ್ಥಿತಿಯನ್ನು ಪರಿಶೀಲಿಸಿದರು. ಘಟನೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ಅವರು, ಶಿಶಿಲೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮೀನುಗಾರಿಕಾ ಇಲಾಖೆಗೆ ಮಾಹಿತಿ ನೀಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.
ಶಿಶಿಲೇಶ್ವರ ದೇವಸ್ಥಾನದ ಸುತ್ತಮುತ್ತ ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯನ್ನು ಮೀನುಗಳ ಸಂರಕ್ಷಿತ ವಲಯವೆಂದು ಪರಿಗಣಿಸಲಾಗಿದ್ದು, ಈ ಪ್ರದೇಶದಲ್ಲಿ ಯಾವುದೇ ರೀತಿಯ ಮೀನುಗಾರಿಕೆಗೆ ಅವಕಾಶವಿಲ್ಲ. ಧಾರ್ಮಿಕ ಹಾಗೂ ಪರಿಸರದ ದೃಷ್ಟಿಯಿಂದ ಮಹತ್ವ ಹೊಂದಿರುವ ಈ ಭಾಗದಲ್ಲಿ ಮೀನುಗಳಿಗೆ ವಿಶೇಷ ರಕ್ಷಣೆ ನೀಡಲಾಗುತ್ತಿದೆ. ಆದಾಗ್ಯೂ, ಕಾನೂನು ಮತ್ತು ಪರಿಸರ ನಿಯಮಗಳನ್ನು ಧಿಕ್ಕರಿಸಿ ಕೆಲ ಕಿಡಿಗೇಡಿಗಳು ವಿಷಕಾರಿ ರಾಸಾಯನಿಕ ಬಳಸಿ ಮೀನುಗಳನ್ನು ಕೊಲ್ಲುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಇದೇ ಪ್ರದೇಶದಲ್ಲಿ ನಡೆದಿದ್ದ ಮೀನುಗಳ ಸಾಮೂಹಿಕ ಸಾವಿನ ಘಟನೆ ಇನ್ನೂ ಜನರ ನೆನಪಿನಿಂದ ಮಾಸುವ ಮುನ್ನವೇ ಮತ್ತೊಮ್ಮೆ ಇಂತಹ ಅಮಾನವೀಯ ಕೃತ್ಯ ನಡೆದಿರುವುದು ಪರಿಸರ ಪ್ರೇಮಿಗಳು ಹಾಗೂ ಭಕ್ತರಲ್ಲಿ ತೀವ್ರ ಕಳವಳ ಉಂಟುಮಾಡಿದೆ. ಕಾಪರ್ ಸಲ್ಫೇಟ್‌ನಂತಹ ವಿಷಕಾರಿ ಪದಾರ್ಥಗಳನ್ನು ನೀರಿಗೆ ಬೆರೆಸುವುದರಿಂದ ಕೇವಲ ಮೀನುಗಳಷ್ಟೇ ಅಲ್ಲದೆ ಇಡೀ ಜಲಚರ ಜೀವಸಂಕುಲ, ನೀರಿನ ಗುಣಮಟ್ಟ ಹಾಗೂ ಪರಿಸರ ಸಮತೋಲನಕ್ಕೂ ಭಾರೀ ಹಾನಿಯಾಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ವೈಜ್ಞಾನಿಕ ತನಿಖೆ ಕೈಗೊಳ್ಳಬೇಕು. ಅಲ್ಲದೆ, ಇಂತಹ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮತ್ಸ್ಯತೀರ್ಥವೆಂಬ ಹೆಗ್ಗಳಿಕೆಗೆ ಧಕ್ಕೆ ತರುವ ಇಂತಹ ಕೃತ್ಯಗಳನ್ನು ತಡೆಯಲು ನಿರಂತರ ನಿಗಾ, ಕಟ್ಟುನಿಟ್ಟಿನ ಮೇಲ್ವಿಚಾರಣೆ ಹಾಗೂ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯವಾಗಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.
ದುಷ್ಕರ್ಮಿಗಳ ಕೃತ್ಯಕ್ಕೆ ಖಂಡನೆ:
ದೇವರ ಮೀನುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಇಂತಹ ದುಷ್ಕೃತ್ಯಗಳು ತೀವ್ರ ಆತಂಕಕ್ಕೆ ಕಾರಣವಾಗಿವೆ. ಹಲವಾರು ಬಾರಿ ಈ ರೀತಿಯ ಘಟನೆಗಳು ಮರುಕಳಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಗ್ರಾಮದಲ್ಲಿ ಭಕ್ತಾದಿಗಳಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ. ಮುಜರಾಯಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ದೇವರ ಮೀನುಗಳ ಸಂರಕ್ಷಣೆಯ ವಿಚಾರದಲ್ಲಿ ಬೇಜವಾಬ್ದಾರಿತನ ತೋರಬಾರದು. ಈ ಕುರಿತು ಕರಪತ್ರ ವಿತರಣೆ, ಸೂಚನಾ ಫಲಕಗಳ ಅಳವಡಿಕೆ, ಭಕ್ತಾದಿಗಳ ಸಭೆಗಳು ಸೇರಿದಂತೆ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು.
ಇಲ್ಲದಿದ್ದಲ್ಲಿ, ಮುಂದಿನ ದಿನಗಳಲ್ಲಿ ಹಿಂದೂ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಬಹುದು ಎಂದು ಜಿಲ್ಲಾ ಧರ್ಮ ಪ್ರಸಾರ ಪ್ರಮುಖರಾದ ಶಿಶಿಲದ ಬಿಜಯರಾಮ ನೆಲ್ಲಿತ್ತಾಯ ಅವರು ತಿಳಿಸಿದ್ದಾರೆ.


