ಕಸದ ರಾಶಿ, ಹೊಂಡ-ಗುಂಡಿಗಳ ನಡುವೆ ಪ್ರಯಾಣಿಕರ ಪರದಾಟ – ಕುಡುಕರ, ಭಿಕ್ಷುಕರ ಅಡ್ಡೆ; ಮಳೆಗಾಲಕ್ಕೂ ಮುನ್ನ ದುರಸ್ತಿಗೆ ಸಾರ್ವಜನಿಕರ ಒತ್ತಾಯ







ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಜೋಡುಮಾರ್ಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದ ಬಸ್ ನಿಲ್ದಾಣ ಇಂದು ಸಂಪೂರ್ಣ ಅವ್ಯವಸ್ಥೆಯ ಗೂಡಾಗಿ ಮಾರ್ಪಟ್ಟಿದ್ದು, ನಿತ್ಯ ಸಂಚರಿಸುವ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಪ್ರಯಾಣಿಕರಿಗೆ ಆಶ್ರಯವಾಗಬೇಕಿದ್ದ ಬಸ್ ನಿಲ್ದಾಣವೇ ಇದೀಗ ಕಸದ ರಾಶಿ, ಹೊಂಡಗುಂಡಿಗಳು, ಕುಡುಕರ ಹಾವಳಿ, ಅನಾಥರು ಹಾಗೂ ಭಿಕ್ಷುಕರ ತಾಣವಾಗಿ ಪರಿವರ್ತನೆಗೊಂಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಕ್ಕಡ ಜೋಡುಮಾರ್ಗವು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸೌತಡ್ಕ ಮಹಾಗಣಪತಿ ದೇವಸ್ಥಾನಗಳಂತಹ ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಹೀಗಾಗಿ ಪ್ರತಿದಿನ ನೂರಾರು ಭಕ್ತಾದಿಗಳು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಗ್ರಾಮೀಣ ಭಾಗದ ಸಾರ್ವಜನಿಕರು ಈ ಬಸ್ ನಿಲ್ದಾಣವನ್ನು ಅವಲಂಬಿಸುತ್ತಾರೆ. ಆದರೆ ಬಸ್ ನಿಲ್ದಾಣದ ನಿರ್ವಹಣೆ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದ್ದು, ಸಾರ್ವಜನಿಕರು ನಿಲ್ದಾಣದೊಳಗೆ ನಿಲ್ಲುವುದಕ್ಕೂ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಸ್ ನಿಲ್ದಾಣದ ಒಳಭಾಗದಲ್ಲಿ ಎಲ್ಲೆಂದರಲ್ಲಿ ಕಸ ಕಡ್ಡಿಗಳು ಬಿದ್ದಿದ್ದು, ದುರ್ವಾಸನೆ ಹರಡುತ್ತಿದೆ. ನೆಲ ಸಂಪೂರ್ಣ ಕಿತ್ತು ಹೋಗಿ ದೊಡ್ಡ ದೊಡ್ಡ ಹೊಂಡಗುಂಡಿಗಳು ನಿರ್ಮಾಣಗೊಂಡಿವೆ. ಮಳೆ ಬಂದಾಗ ಈ ಹೊಂಡಗಳಲ್ಲಿ ನೀರು ನಿಂತು ಕೆಸರುಮಯ ವಾತಾವರಣ ನಿರ್ಮಾಣವಾಗುತ್ತದೆ. ಪ್ರಯಾಣಿಕರು ಜಾರಿ ಬೀಳುವ ಭೀತಿ ಕೂಡ ಎದುರಾಗಿದೆ. ಕೆಲವೆಡೆ ಸಿಮೆಂಟ್ ತುಂಡುಗಳು ಹೊರಬಂದಿದ್ದು, ಮಕ್ಕಳು ಹಾಗೂ ವೃದ್ಧರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಬಸ್ ನಿಲ್ದಾಣದೊಳಗೆ ರಾತ್ರಿ ವೇಳೆ ಕುಡುಕರ ಹಾವಳಿ ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕೆಲವರು ಮದ್ಯಪಾನ ಮಾಡಿ ನಿಲ್ದಾಣದೊಳಗೆ ಮಲಗಿರುವ ದೃಶ್ಯ ಸಾಮಾನ್ಯವಾಗಿದ್ದು, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಆತಂಕದಲ್ಲೇ ಬಸ್‌ಗಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಜೊತೆಗೆ ಅನಾಥರು ಹಾಗೂ ಭಿಕ್ಷುಕರು ನಿಲ್ದಾಣವನ್ನು ತಂಗುದಾಣವಾಗಿ ಬಳಸುತ್ತಿರುವುದರಿಂದ ಸಾರ್ವಜನಿಕರಿಗೆ ಮುಕ್ತವಾಗಿ ಒಳಗೆ ಪ್ರವೇಶಿಸಲು ಸಹ ಅಸಹಜ ವಾತಾವರಣ ನಿರ್ಮಾಣವಾಗಿದೆ.
ಇದರಿಂದಾಗಿ ಅನೇಕ ಪ್ರಯಾಣಿಕರು ಬಸ್ ನಿಲ್ದಾಣವನ್ನು ಬಿಟ್ಟು ಅದರ ಎರಡು ಬದಿಯಲ್ಲಿರುವ ಅಂಗಡಿಗಳ ಮುಂಭಾಗದಲ್ಲಿ ಹಾಗೂ ರಸ್ತೆ ಬದಿಯಲ್ಲಿ ನಿಂತು ಬಸ್‌ಗಾಗಿ ಕಾಯುತ್ತಿದ್ದಾರೆ. ಇದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದ್ದು, ಅಪಘಾತದ ಭೀತಿಯೂ ಹೆಚ್ಚಾಗಿದೆ. ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಿಸಿಲು, ಮಳೆ ನಡುವೆಯೇ ರಸ್ತೆಯ ಬದಿಯಲ್ಲಿ ನಿಂತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.
ಇನ್ನೇನು ಮಳೆಗಾಲ ಆರಂಭವಾಗಲಿದ್ದು, ಈ ಬಸ್ ನಿಲ್ದಾಣದ ಅಗತ್ಯತೆ ಮತ್ತಷ್ಟು ಹೆಚ್ಚಾಗಿದೆ. ಗ್ರಾಮೀಣ ಭಾಗದ ಜನರಿಗೆ ಮಳೆಯಿಂದ ರಕ್ಷಣೆ ಪಡೆಯಲು ಸಾರ್ವಜನಿಕ ಬಸ್ ನಿಲ್ದಾಣವೇ ಪ್ರಮುಖ ಆಶ್ರಯವಾಗಿದೆ. ಆದರೆ ಸದ್ಯದ ದುಸ್ಥಿತಿಯಲ್ಲಿ ಬಸ್ ನಿಲ್ದಾಣದೊಳಗೆ ನಿಲ್ಲುವುದೇ ಕಷ್ಟಕರವಾಗಿದ್ದು, ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಲ್ಲಿ ಓದುವ ಅಭಿರುಚಿ ಬೆಳೆಸುವ ಉದ್ದೇಶದಿಂದ ಸ್ಥಳೀಯ ಪಂಚಾಯಿತಿ ವತಿಯಿಂದ “ಪುಸ್ತಕದ ಗೂಡು” ಯೋಜನೆಯಡಿ ಬಸ್ ನಿಲ್ದಾಣದೊಳಗೆ ವಿಶೇಷ ಗೂಡನ್ನು ನಿರ್ಮಿಸಿ ವಿವಿಧ ಪುಸ್ತಕಗಳನ್ನು ಇರಿಸಲಾಗಿತ್ತು. ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಸಮಯ ಸಿಕ್ಕಾಗ ಪುಸ್ತಕ ಓದುವ ಉತ್ತಮ ಉದ್ದೇಶದ ಯೋಜನೆ ಇದಾಗಿತ್ತು. ಆದರೆ ಕಿಡಿಗೇಡಿಗಳ ದುಷ್ಕೃತ್ಯದಿಂದ ಪುಸ್ತಕ ಗೂಡು ಸಂಪೂರ್ಣ ಹಾನಿಗೊಳಗಾಗಿದ್ದು, ಅದರೊಳಗಿದ್ದ ಪುಸ್ತಕಗಳು ಕಾಣೆಯಾಗಿವೆ. ಸಾರ್ವಜನಿಕ ಆಸ್ತಿಯನ್ನು ಸಂರಕ್ಷಿಸುವ ಜವಾಬ್ದಾರಿ ಇಲ್ಲದಿರುವುದು ಈ ಘಟನೆಗಳಿಂದ ಸ್ಪಷ್ಟವಾಗುತ್ತಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ಹಲವು ಬಾರಿ ಸಮಸ್ಯೆ ಕುರಿತು ಮನವಿ ಸಲ್ಲಿಸಿದ್ದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಬಸ್ ನಿಲ್ದಾಣದ ದುರಸ್ತಿ ಕಾರ್ಯ ಕೈಗೊಂಡು, ಕಸದ ರಾಶಿಯನ್ನು ತೆರವುಗೊಳಿಸಿ, ಹೊಂಡಗುಂಡಿಗಳನ್ನು ಮುಚ್ಚಿ, ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸ್ವಚ್ಛ ವಾತಾವರಣ ಕಲ್ಪಿಸಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.


