ಪಟ್ಲಡ್ಕ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿಯ ಪ್ರಥಮ ವಾರ್ಷಿಕೋತ್ಸವ; 516 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, 20 ತಂಡಗಳಿಂದ ಕುಣಿತ ಭಜನೆ







ಕೊಕ್ಕಡ: ಕಲಿಯುಗದಲ್ಲಿ ಭಜನೆಯು ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದ್ದು, ಭಕ್ತಿ, ಶ್ರದ್ಧೆ ಹಾಗೂ ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಶಕ್ತಿಯುತ ಮಾಧ್ಯಮವಾಗಿದೆ ಎಂದು ಶ್ರೀಧಾಮ ಮಾಣಿಲ ಪರಮಹಂಸ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು.

ಕಡಬ ತಾಲೂಕಿನ ಪಟ್ಲಡ್ಕ–ಕೌಕ್ರಾಡಿಯಲ್ಲಿರುವ ಶ್ರೀ ಗಡಿಯಾಡಿ ಅದಿಮೊಗೇರ್ಕಳ ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನದ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿಯ ಪ್ರಥಮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಇಂದಿನ ಯಾಂತ್ರಿಕ ಬದುಕಿನಲ್ಲಿ ಮಕ್ಕಳಲ್ಲಿ ಧಾರ್ಮಿಕ ಮೌಲ್ಯಗಳು, ಮಾನವೀಯತೆ ಹಾಗೂ ಸಂಸ್ಕಾರಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಭಜನೆಯಂತಹ ಆಧ್ಯಾತ್ಮಿಕ ಚಟುವಟಿಕೆಗಳು ಅವರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತವೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಮಕ್ಕಳಲ್ಲಿ ಭಕ್ತಿ, ಶಿಸ್ತು ಹಾಗೂ ಧಾರ್ಮಿಕ ಜಾಗೃತಿ ಬೆಳೆಸುವ ಉದ್ದೇಶದಿಂದ ವಿಶೇಷವಾಗಿ ಕುಣಿತ ಭಜನೆ ಕಾರ್ಯಕ್ರಮವನ್ನು ಆರಂಭಿಸಿದ್ದು, ಇದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಭಜನೆಯು ಕೇವಲ ದೇವರ ನಾಮಸ್ಮರಣೆ ಮಾತ್ರವಲ್ಲ, ಸಾಹಿತ್ಯ, ಸಂಗೀತ, ನೃತ್ಯ ಹಾಗೂ ಭಕ್ತಿಯ ಸಮನ್ವಯವಾಗಿದೆ. ಭಜನೆಯ ಮೂಲಕ ಮನಸ್ಸಿಗೆ ನೆಮ್ಮದಿ, ಏಕಾಗ್ರತೆ ಹಾಗೂ ಸೇವಾಭಾವ ಮೂಡುತ್ತದೆ. ಪ್ರತಿಯೊಂದು ಮನೆಯಲ್ಲೂ ದೇವರ ನಾಮಸ್ಮರಣೆ ಮೊಳಗಿದಾಗ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಧಾರ್ಮಿಕ ಜಾಗೃತಿ ಹೆಚ್ಚಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಾದ್ಯಂತ ಅನೇಕ ಭಜನಾ ತಂಡಗಳನ್ನು ಸಂಘಟಿಸಿರುವ ಸುಂದರ ಗೌಡ ಒಗ್ಗು ಹಾಗೂ ಹರೀಶ್ ನೆರಿಯ ಅವರ ಸೇವೆಯನ್ನು ಶ್ಲಾಘಿಸಿದ ಅವರು, ಭಜನೆಗೆ ಶಿಸ್ತು, ಸಂಯಮ ಹಾಗೂ ಪ್ರಬುದ್ಧತೆಯ ಸ್ವರೂಪ ನೀಡುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಭಜನಾ ಕಮ್ಮಟಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಪಟ್ಲಡ್ಕ ಕೊರಗಜ್ಜ ಕ್ಷೇತ್ರವು ಅತ್ಯಂತ ಕಾರ್ಣಿಕ ಕ್ಷೇತ್ರವಾಗಿದ್ದು, ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಭಜನಾ ಪರಿಷತ್ತಿನ ಸಹಯೋಗದೊಂದಿಗೆ ಇನ್ನಷ್ಟು ಭಜನಾ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಇದರೊಂದಿಗೆ ಆರೋಗ್ಯ ಶಿಬಿರಗಳು, ವಿಕಲಚೇತನರ ನೆರವು ಕಾರ್ಯಕ್ರಮಗಳು, ಬಡ ವಿದ್ಯಾರ್ಥಿಗಳಿಗೆ ಸಹಾಯ ಹಾಗೂ ವೃದ್ಧಾಶ್ರಮಗಳಿಗೆ ಸಂಬಂಧಿಸಿದ ಸಮಾಜಮುಖಿ ಕಾರ್ಯಗಳನ್ನು ಕ್ಷೇತ್ರದ ವತಿಯಿಂದ ಹಮ್ಮಿಕೊಳ್ಳುವಂತೆ ಸಲಹೆ ನೀಡಿದ ಅವರು, ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಪಟ್ಲಡ್ಕ ಶ್ರೀ ಕ್ಷೇತ್ರ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಭಜನಾ ಸಮಿತಿಯ ಗೌರವಾಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ ಮಾತನಾಡಿ, ದೈವ ಕ್ಷೇತ್ರಗಳು ಕೇವಲ ಪೂಜೆ–ಪುನಸ್ಕಾರಗಳಿಗೆ ಸೀಮಿತವಾಗದೆ ಸಮಾಜದ ಅಭಿವೃದ್ಧಿಯ ಕೇಂದ್ರಗಳಾಗಬೇಕು ಎಂದು ಹೇಳಿದರು. ದೈವಸ್ಥಾನದ ಜೀರ್ಣೋದ್ಧಾರದ ಬಳಿಕ ಪ್ರತಿ ಸಂಕ್ರಮಣದಂದು ಕ್ಷೇತ್ರದಲ್ಲಿ ಅಗೇಲು ಸೇವೆಯನ್ನು ನಿರಂತರವಾಗಿ ನಡೆಸಲಾಗುತ್ತಿದ್ದು, ಸೇವೆ ಸಲ್ಲಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಕ್ಷೇತ್ರದ ಮೇಲಿನ ಭಕ್ತರ ಅಪಾರ ನಂಬಿಕೆಗೆ ಸಾಕ್ಷಿಯಾಗಿದೆ ಎಂದರು.
ಭಜನೆಯ ಮೂಲಕ ಮಕ್ಕಳಲ್ಲಿ ಮತ್ತು ಯುವಜನತೆಯಲ್ಲಿ ಧಾರ್ಮಿಕ ಸಂಸ್ಕಾರ ಬೆಳೆಸುವ ಕಾರ್ಯವನ್ನು ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಪ್ರತಿಯೊಂದು ಮನೆಯಲ್ಲೂ ಸಂಜೆಯ ವೇಳೆಯಲ್ಲಿ ಭಜನೆ ಹಾಗೂ ಪ್ರಾರ್ಥನೆ ಮಾಡುವ ಸಂಪ್ರದಾಯ ಬೆಳೆಸಿಕೊಳ್ಳಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಹರೀಶ್ ನೆರಿಯ ಅವರ ನೇತೃತ್ವದಲ್ಲಿ ಹಾಗೂ ಸುಂದರ ಗೌಡ ಒಗ್ಗು ಅವರ ಮಾರ್ಗದರ್ಶನದಲ್ಲಿ ಆರಂಭಗೊಂಡ ಭಜನಾ ತಂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷೆ ಗೀತಾ ನೆಲ್ಯಡ್ಕ ವಹಿಸಿದ್ದರು. ಕಡಬ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಒಗ್ಗು, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಹಾಗೂ ಹರೀಶ್ ನೆರಿಯ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕೊಕ್ಕಡ ಭಜನಾ ಮಂಡಳಿಯ ಹಿರಿಯ ಭಜಕ ಪುರುಷೋತ್ತಮ ಗೌಡ ಮಡ್ಯಲಗುಂಡಿ, ಪಟ್ಲಡ್ಕ ಶ್ರೀ ಕ್ಷೇತ್ರ ಆಡಳಿತ ಮಂಡಳಿ ಉಪಾಧ್ಯಕ್ಷ ಹರೀಶ್ ಪಿ., ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಅಳಿಯೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಸೇವೆ ಸಲ್ಲಿಸುತ್ತಿರುವ ಹರೀಶ್ ಪಿ. ಪಟ್ಲಡ್ಕ, ಪ್ರಕಾಶ್ ರಾವ್, ನವೀನ್, ಸತೀಶ್ ಪಿ. ಪಟ್ಲಡ್ಕ, ಬಾಬಣ್ಣ, ಸುಶೀಲ ಎನ್. ಹಾಗೂ ಲೀಲಾವತಿ ಅವರನ್ನು ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು. ಅಲ್ಲದೆ, ಶ್ರೀ ಕ್ಷೇತ್ರದ ವತಿಯಿಂದ ಹಾಗೂ ಬೆಂಗಳೂರಿನ ತಗ್ಗಟ್ಟಿ ಚೆನ್ನಾಚಾರಿ–ಚಂದ್ರಮ್ಮ ದಂಪತಿಯವರ ಸಹಕಾರದೊಂದಿಗೆ 516 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.
ಭಜನಾ ಸಮಿತಿಯ ಕಾರ್ಯದರ್ಶಿ ದೀಕ್ಷಾ ಸಾಲ್ಯಾನ್ ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿದರು. ಕಾರ್ಯಕ್ರಮ ನಿರೂಪಣೆಯನ್ನೂ ಅವರು ನಡೆಸಿದರು. ಕೋಶಾಧಿಕಾರಿ ಲತಾ ವಿಠಲ ಪಟ್ಲಡ್ಕ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿವಿಧ ಭಾಗಗಳಿಂದ ಆಗಮಿಸಿದ್ದ 20 ಭಜನಾ ತಂಡಗಳಿಂದ ಆಕರ್ಷಕ ಕುಣಿತ ಭಜನೆ ನಡೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿಯ ಪದಾಧಿಕಾರಿಗಳು ಸಹಕರಿಸಿದರು.


