70 ಟನ್ ಹರಕೆ ಗಂಟೆಗಳ ವಿಲೇವಾರಿ: ಸೌತಡ್ಕ ಇತಿಹಾಸದಲ್ಲೇ ದಾಖಲೆ!

ಶೇರ್ ಮಾಡಿ

ಆರು ವರ್ಷಗಳ ನೆನೆಗುದಿಗೆ ಅಂತ್ಯ; ₹3.51 ಕೋಟಿಗೆ ಮಾರಾಟಗೊಂಡ ಗಂಟೆಗಳು|| ಪಾರದರ್ಶಕ ಬಿಡ್ ಪ್ರಕ್ರಿಯೆ ಮೂಲಕ ಅಧಿಕಾರಿಗಳ ಸಮ್ಮುಖದಲ್ಲಿ ತೂಕ ಪರಿಶೀಲನೆ ಬಳಿಕ ಮೂರು ಲಾರಿಗಳಲ್ಲಿ ಸಾಗಣೆ

 

ಆರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಗಂಟೆಗಳ ವಿಲೇವಾರಿ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ಹಾಗೂ ಸರ್ಕಾರದ ನಿಯಮಾವಳಿಗಳ ಅನುಸಾರ ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಇದರಿಂದ ದೇವಸ್ಥಾನಕ್ಕೆ ₹3.51 ಕೋಟಿ ಆದಾಯ ಲಭಿಸಿದೆ.
– ಯೇಸುರಾಜ್, ಸೌತಡ್ಕ ಮಹಾಗಣಪತಿ ದೇವಸ್ಥಾನದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ

ಮೂರು ಕೋಟಿಗೂ ಅಧಿಕ ಮೊತ್ತದ ವ್ಯವಹಾರವಾಗಿದ್ದರಿಂದ ಬಿಡ್ ಪ್ರಕ್ರಿಯೆಗೆ ಬೆಂಗಳೂರಿನ ಆಯುಕ್ತರ ಅನುಮೋದನೆ ಅಗತ್ಯವಾಗಿತ್ತು. ಈ ಅನುಮೋದನೆ ದೊರಕಿಸಲು ಹಾಗೂ ವಿಲೇವಾರಿ ಪ್ರಕ್ರಿಯೆಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ವಿಶೇಷ ಆಸಕ್ತಿ ವಹಿಸಿ ಅಗತ್ಯ ನೆರವು ನೀಡಿದ್ದಾರೆ. ಅವರ ಸಹಕಾರದಿಂದಲೇ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು. ಇದು ದೇವಸ್ಥಾನದ ಇತಿಹಾಸದಲ್ಲಿ ಮಹತ್ವದ ದಾಖಲೆಯಾಗಿದೆ.
– ಸುಬ್ರಹ್ಮಣ್ಯ ಶಬರಾಯ, ಅಧ್ಯಕ್ಷರು, ಸೌತಡ್ಕ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ

ಸೌತಡ್ಕ: ಕಳೆದ ಸುಮಾರು ಆರು ವರ್ಷಗಳಿಂದ ವಿವಿಧ ಆಡಳಿತಾತ್ಮಕ ಹಾಗೂ ತಾಂತ್ರಿಕ ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹರಕೆ ಗಂಟೆಗಳ ವಿಲೇವಾರಿ ಪ್ರಕ್ರಿಯೆ ಅಂತಿಮಗೊಂಡಿದ್ದು, ದೇವಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿಗೆ 70 ಟನ್ ತೂಕದ ಗಂಟೆಗಳು ₹3.51 ಕೋಟಿಗೆ ವಿಲೇವಾರಿಯಾಗಿರುವುದು ಐತಿಹಾಸಿಕ ಘಟನೆಯಾಗಿ ದಾಖಲಾಗಿದೆ.

ಹಲವು ವರ್ಷಗಳಿಂದ ಸಂಗ್ರಹವಾಗಿದ್ದ ಹರಕೆ ಗಂಟೆಗಳ ವಿಲೇವಾರಿ ವಿಚಾರವು ಹಲವು ಬಾರಿ ಚರ್ಚೆ ಹಾಗೂ ವಿವಾದಗಳಿಗೆ ಕಾರಣವಾಗಿತ್ತು. ನೂತನ ಆಡಳಿತ ಸಮಿತಿ ಅಧಿಕಾರಕ್ಕೆ ಬಂದ ಬಳಿಕ ಪ್ರಕ್ರಿಯೆಗೆ ಅಡ್ಡಿಯಾಗಿದ್ದ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಿಕೊಂಡು ಯಶಸ್ವಿಯಾಗಿ ಬಿಡ್ ಪ್ರಕ್ರಿಯೆ ನಡೆಸಿದೆ.

ಬಿಡ್ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮೊತ್ತವನ್ನು ನಮೂದಿಸಿದ್ದ ಧಾರವಾಡದ ಈಶ್ವರ್‌ಲಾಲ್ ಕನ್ಯಾಲಾಲ್ ಅಗ್ನಿಹೋತ್ರಿ ಅವರು ₹3,51,16,900ಕ್ಕೆ ಗಂಟೆಗಳನ್ನು ಪಡೆದುಕೊಂಡಿದ್ದಾರೆ. ಬಿಡ್ ಮೊತ್ತವನ್ನು ಏಪ್ರಿಲ್ 10 ಹಾಗೂ ಮೇ 5ರಂದು ಎರಡು ಕಂತುಗಳಲ್ಲಿ ಬ್ಯಾಂಕ್‌ಗೆ ಜಮೆ ಮಾಡಲಾಗಿದೆ.

ಗುರುವಾರ ಹಾಗೂ ಶುಕ್ರವಾರ ಎರಡು ದಿನಗಳ ಕಾಲ ನಡೆದ ವಿಲೇವಾರಿ ಪ್ರಕ್ರಿಯೆಯಲ್ಲಿ ಮೂರು ಲಾರಿಗಳ ಮೂಲಕ ಗಂಟೆಗಳನ್ನು ಸಾಗಣೆ ಮಾಡಲಾಯಿತು. ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಪ್ರವೀಣ್, ಕಾನೂನು ಮಾಪನಶಾಸ್ತ್ರ ಇಲಾಖೆ ಪುತ್ತೂರು ಸಹಾಯಕ ನಿಯಂತ್ರಕರು ಕೆ.ಜಿ.ಕುಲಕರ್ಣಿ, ತೂಕ ಮತ್ತು ಮೌಲ್ಯಮಾಪನ ಇಲಾಖೆಯ ಪರಿವೀಕ್ಷಣಾಧಿಕಾರಿ ನರೇಂದ್ರ, ದೇವಸ್ಥಾನದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಆಡಳಿತ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಸದಸ್ಯರಾದ ವಿಶ್ವನಾಥ ಕೊಲ್ಲಾಜೆ, ಗಣೇಶ್ ಕಾಶಿ ಹಾಗೂ ಇತರ ಸದಸ್ಯರು ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ಸಂಪೂರ್ಣ ಪಾರದರ್ಶಕವಾಗಿ ವಿಡಿಯೊ ಚಿತ್ರೀಕರಣದೊಂದಿಗೆ ಪ್ರಕ್ರಿಯೆ ನಡೆಸಲಾಯಿತು.

ಗಂಟೆಗಳನ್ನು ತುಂಬಿದ ಮೂರು ಲಾರಿಗಳನ್ನು ಉಪ್ಪಿನಂಗಡಿ ಸಮೀಪದ ಮಠದಲ್ಲಿರುವ ವೇಬ್ರಿಡ್ಜ್‌ನಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ತೂಕ ಪರಿಶೀಲನೆ ನಡೆಸಿ ಖಚಿತತೆ ಪಡೆದ ಬಳಿಕ ಖರೀದಿದಾರರಿಗೆ ಹಸ್ತಾಂತರಿಸಲಾಯಿತು.

ದೇವಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಹರಕೆ ಗಂಟೆಗಳ ವಿಲೇವಾರಿ ನಡೆದಿದ್ದು, ದೇವಸ್ಥಾನದ ಆಡಳಿತದಲ್ಲಿ ಮಹತ್ವದ ಮೈಲಿಗಲ್ಲಾಗಿ ಪರಿಗಣಿಸಲಾಗುತ್ತಿದೆ.

 

Leave a Reply

error: Content is protected !!