ಅಧ್ಯಕ್ಷರಾಗಿ ಸುಪ್ರಿತಾ ರವಿಚಂದ್ರ ಹೊಸವೊಕ್ಲು, ಕಾರ್ಯದರ್ಶಿಯಾಗಿ ವಸಂತಿ ಜೆ.ಆಯ್ಕೆ







ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ. ಟ್ರಸ್ಟ್) ಕಡಬ ತಾಲೂಕು, ನೆಲ್ಯಾಡಿ ವಲಯದ ಭಜನಾ ಪರಿಷತ್ತಿನ ಸಭೆಯು ನೆಲ್ಯಾಡಿಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ನೆಲ್ಯಾಡಿ ವಲಯದ ಭಜನಾ ಪರಿಷತ್ತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸುಪ್ರಿತಾ ರವಿಚಂದ್ರ ಹೊಸವೊಕ್ಲು, ಉಪಾಧ್ಯಕ್ಷರಾಗಿ ಗೀತಾ, ಕಾರ್ಯದರ್ಶಿಯಾಗಿ ವಸಂತಿ ಜೆ., ಜೊತೆ ಕಾರ್ಯದರ್ಶಿಯಾಗಿ ಯಶ್ವಿನಿ ಹಾಗೂ ಕೋಶಾಧಿಕಾರಿಯಾಗಿ ಪುರಂದರ ಆಯ್ಕೆಯಾದರು.
ಭಜನಾ ಪರಿಷತ್ತಿನ ಗೌರವ ಸಲಹೆಗಾರ ಸತ್ಯನಾರಾಯಣ ಹೆಗ್ಡೆ ಮಾತನಾಡಿ, ಭಜನೆ ಇರುವಲ್ಲಿ ವಿಭಜನೆಗೆ ಅವಕಾಶವಿಲ್ಲ. ಈ ಪುಣ್ಯ ಸೇವೆಯಲ್ಲಿ ಭಾಗವಹಿಸುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ಭಜನಾ ಪರಿಷತ್ತಿನ ಎಲ್ಲಾ ತಂಡಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವಾರ್ಷಿಕೋತ್ಸವಗಳನ್ನು ಅತ್ಯುತ್ತಮವಾಗಿ ನಡೆಸುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಹೇಳಿದರು.
ಭಜನಾ ಪರಿಷತ್ತಿನ ಸಮನ್ವಯಾಧಿಕಾರಿ ಸಂತೋಷ್ ಕುಮಾರ್ ಅವರು ನೂತನವಾಗಿ ಆಯ್ಕೆಯಾದ ವಲಯದ ಪದಾಧಿಕಾರಿಗಳಿಗೆ ಶುಭ ಹಾರೈಸಿ, ಭಜನೆಯ ಮಹತ್ವ ಹಾಗೂ ಸಂಘಟನೆಯ ಕಾರ್ಯಚಟುವಟಿಕೆಗಳ ಕುರಿತು ಉಪಯುಕ್ತ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.
ಕಡಬ ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ಸುಂದರ ಗೌಡ ಒಗ್ಗು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನೆಲ್ಯಾಡಿ ವಲಯದ ಎಲ್ಲಾ ಭಜನಾ ತಂಡಗಳು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಭಜನಾ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸುವಂತೆ ಕರೆ ನೀಡಿದರು. ಅಲ್ಲದೆ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಲಯದ ಎಲ್ಲಾ ಭಜನಾ ಮಂಡಳಿಗಳ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಹಾಗೂ ಭಜನಾ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು. ನೆಲ್ಯಾಡಿ ವಲಯದ ಮೇಲ್ವಿಚಾರಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿ ಸುಮನಾ ಎಸ್. ಸ್ವಾಗತಿಸಿದರು. ವೇದಾ ಪಿ. ವಂದಿಸಿದರು.


