ಕೊಕ್ಕಡ: ನ್ಯೂ ರೋಹಿಣಿ ಜ್ಯೂಸ್ ಸೆಂಟರ್ ಮಾಲಕ ಧನಂಜಯ್ ನಿಧನ; ತುರ್ತು ವೈದ್ಯಕೀಯ ಸೇವೆಯ ವೈಫಲ್ಯದ ಆರೋಪ, ಪ್ರತಿಭಟನೆ ಎಚ್ಚರಿಕೆ

ಶೇರ್ ಮಾಡಿ

ಆಂಬುಲೆನ್ಸ್ ಸೇವೆ ಸಿಗದೆ ಹೃದಯಾಘಾತಕ್ಕೆ ಬಲಿ? – ಕೊಕ್ಕಡ ಆರೋಗ್ಯ ಕೇಂದ್ರದ ವಿರುದ್ಧ ಸಾರ್ವಜನಿಕರ ಆಕ್ರೋಶ

 

ಕೊಕ್ಕಡ: ನ್ಯೂ ರೋಹಿಣಿ ಜ್ಯೂಸ್ ಸೆಂಟರ್ ಮಾಲಕ ಧನಂಜಯ್ ನಿಧನ; ತುರ್ತು ವೈದ್ಯಕೀಯ ಸೇವೆಯ ವೈಫಲ್ಯದ ಆರೋಪ, ಪ್ರತಿಭಟನೆ ಎಚ್ಚರಿಕೆ

ಕೊಕ್ಕಡ: ಕೊಕ್ಕಡ ಕೊಪ್ಪಳಕೋಡಿ ನಿವಾಸಿ ಹಾಗೂ ಸೌತಡ್ಕ ದ್ವಾರದ ಸಮೀಪದ ನ್ಯೂ ರೋಹಿಣಿ ಜ್ಯೂಸ್ ಸೆಂಟರ್ ಮಾಲಕ ಧನಂಜಯ್ (36) ಅವರು ಹೃದಯಾಘಾತದಿಂದ ಶನಿವಾರ ಬೆಳಗ್ಗೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆಯೇ ನಿಧನ ಹೊಂದಿದ ಘಟನೆ ಸಂಭವಿಸಿದೆ.

ಮಾಹಿತಿಯಂತೆ, ಶುಕ್ರವಾರ ಮಧ್ಯರಾತ್ರಿ ಸುಮಾರು 12 ಗಂಟೆ ವೇಳೆಗೆ ಮನೆಯಲ್ಲಿ ಮಲಗಿದ್ದ ಧನಂಜಯ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರು.

ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ 108 ಆಂಬುಲೆನ್ಸ್ ಲಭ್ಯವಿದ್ದರೂ ಸಕಾಲದಲ್ಲಿ ಸೇವೆ ದೊರೆಯಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಕುಟುಂಬಸ್ಥರು ಹಾಗೂ ಸ್ಥಳೀಯರು ಖಾಸಗಿ ಕಾರಿನ ಮೂಲಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಈ ವೇಳೆ ದಾರಿ ಮಧ್ಯೆಯೇ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ಹಿನ್ನೆಲೆಯಲ್ಲಿ ಸ್ಥಳೀಯ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕೆಲವೇ ವರ್ಷಗಳ ಹಿಂದೆ ಕೊಕ್ಕಡದಲ್ಲಿ ಸುಸಜ್ಜಿತ ಆರೋಗ್ಯ ಕೇಂದ್ರ ನಿರ್ಮಿಸಲಾಗಿದ್ದರೂ, ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಸೇವೆ ದೊರೆಯದಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ತುರ್ತು ವೈದ್ಯಕೀಯ ಸೇವೆಗಳಲ್ಲಿನ ಲೋಪದಿಂದ ಈ ರೀತಿಯ ಘಟನೆಗಳು ಆಗಾಗ್ಗೆ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯದಿದ್ದಲ್ಲಿ ಕೊಕ್ಕಡ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಸಾರ್ವಜನಿಕ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಕೊರತೆ ಇದೆ. 108 ಆಂಬುಲೆನ್ಸ್‌ಗೆ ಕೇವಲ ಒಬ್ಬ ಚಾಲಕರಿದ್ದು, ಅವರು ಹಗಲಿನ ವೇಳೆ ಕರ್ತವ್ಯ ನಿರ್ವಹಿಸುತ್ತಾರೆ. ರಾತ್ರಿಯ ಸಮಯದಲ್ಲಿ ತುರ್ತು ಕರೆ ಬಂದಾಗಲೂ ಸೇವೆ ಒದಗಿಸುತ್ತಿದ್ದರು. ಘಟನೆ ನಡೆದ ದಿನ ಆ ಚಾಲಕ ರಜೆಯಲ್ಲಿದ್ದ ಕಾರಣ ಆಂಬುಲೆನ್ಸ್ ಸೇವೆ ಲಭ್ಯವಾಗಿರಲಿಲ್ಲ.”
— ಡಾ.ತುಷಾರ, ಆಡಳಿತ ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಕ್ಕಡ.

 

Leave a Reply

error: Content is protected !!