






ಕೊಕ್ಕಡ : ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಪೊಳಿಪ್ಪು ಪೂವಪ್ಪ ನಾಯ್ಕರ ಮನೆಯಂಗಳದಲ್ಲಿ ಸುಮಾರು ಹತ್ತು ಅಡಿ ಉದ್ದದ ಕಾಳಿಂಗ ಸರ್ಪ ಸುತ್ತಾಡುತ್ತಿದ್ದರಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸರ್ಪವನ್ನು ಗಮನಿಸಿದ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕಳೆಂಜ ಉಪವಲಯ ಅರಣ್ಯಾಧಿಕಾರಿ ಹರಿಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಇಲಾಖೆಯ ಅಧಿಕೃತ ಉರಗ ರಕ್ಷಕ ಸುರೇಶ್ ಶಿಬಾಜೆ ಅವರು ಸ್ಥಳಕ್ಕೆ ಧಾವಿಸಿದರು. ಅತ್ಯಂತ ಚುರುಕಿನ ಕಾರ್ಯಾಚರಣೆ ನಡೆಸಿದ ಅವರು ಬೃಹತ್ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆಹಿಡಿದು ರಕ್ಷಿಸುವಲ್ಲಿ ಯಶಸ್ವಿಯಾದರು.ಬಳಿಕ ಸರ್ಪಕ್ಕೆ ಯಾವುದೇ ಹಾನಿಯಾಗದಂತೆ ಅರಣ್ಯ ಇಲಾಖೆಯ ನಿಯಮಾನುಸಾರ ಸಮೀಪದ ರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು.
ಅರಣ್ಯ ಇಲಾಖೆಯ ಈ ತ್ವರಿತ ಕಾರ್ಯಾಚರಣೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಾಳಿಂಗ ಸರ್ಪದಂತಹ ಅಪರೂಪದ ಹಾಗೂ ಸಂರಕ್ಷಿತ ಪ್ರಭೇದದ ಸರ್ಪಗಳನ್ನು ಕಂಡುಬಂದಲ್ಲಿ ಆತಂಕಕ್ಕೆ ಒಳಗಾಗದೆ ತಕ್ಷಣ ಅರಣ್ಯ ಇಲಾಖೆ ಅಥವಾ ಅಧಿಕೃತ ಉರಗ ರಕ್ಷಕರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


