ಅರಸಿನಮಕ್ಕಿ: ಸರ್ಕಾರಿ ಪ್ರೌಢಶಾಲೆಯ ಶೇ.100 ಫಲಿತಾಂಶಕ್ಕೆ ಸೇವಾ ಟ್ರಸ್ಟ್‌ನಿಂದ ವಿದ್ಯಾರ್ಥಿ-ಶಿಕ್ಷಕರಿಗೆ ಸನ್ಮಾನ

ಶೇರ್ ಮಾಡಿ

 

ಅರಸಿನಮಕ್ಕಿ: ಸರ್ಕಾರಿ ಪ್ರೌಢಶಾಲೆಯ ಶೇ.100 ಫಲಿತಾಂಶಕ್ಕೆ ಸೇವಾ ಟ್ರಸ್ಟ್‌ನಿಂದ ವಿದ್ಯಾರ್ಥಿ-ಶಿಕ್ಷಕರಿಗೆ ಸನ್ಮಾನ

ಕೊಕ್ಕಡ: ಅರಸಿನಮಕ್ಕಿ ಸರ್ಕಾರಿ ಪ್ರೌಢಶಾಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಶೇ.100 ಫಲಿತಾಂಶ ಹಾಗೂ 85.29 ಶೇ. ಗುಣಾತ್ಮಕ ಫಲಿತಾಂಶ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದ ಹಿನ್ನೆಲೆಯಲ್ಲಿ, ಅರಸಿನಮಕ್ಕಿ ಸೇವಾ ಟ್ರಸ್ಟ್ ವತಿಯಿಂದ ದಿವಂಗತ ಅಡ್ಕಾಡಿ ಜಗನ್ನಾಥ ಗೌಡ ಅವರ ಸಂಸ್ಮರಣೆಯೊಂದಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಅಭಿನಂದಿಸುವ ಕಾರ್ಯಕ್ರಮ ಶನಿವಾರ ನಡೆಯಿತು.

1967ರಲ್ಲಿ ಸ್ಥಾಪನೆಯಾದ ಈ ಶಾಲೆ, 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶದೊಂದಿಗೆ 85.29 ಶೇ. ಗುಣಾತ್ಮಕ ಫಲಿತಾಂಶ ದಾಖಲಿಸಿ ಗಮನಾರ್ಹ ಸಾಧನೆ ಮಾಡಿದೆ. ಈ ಸಾಧನೆಯನ್ನು ಮೆಚ್ಚಿದ ಅರಸಿನಮಕ್ಕಿ ಸೇವಾ ಟ್ರಸ್ಟ್ ವತಿಯಿಂದ ಉತ್ತಮ ಸಾಧನೆಗೈದ 47 ವಿದ್ಯಾರ್ಥಿಗಳು ಹಾಗೂ ಅವರಿಗೆ ಬೋಧನೆ ನೀಡಿದ ಶಿಕ್ಷಕವೃಂದವನ್ನು ಗೌರವಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಧರ್ಮರಾಜ್ ಗೌಡ ಅಡ್ಕಾಡಿ ಸರ್ಕಾರಿ ಶಾಲೆಯ ಈ ಸಾಧನೆ ಶ್ಲಾಘನೀಯವಾಗಿದ್ದು, ಸರ್ಕಾರಿ ಶಾಲೆಗಳು ಮತ್ತಷ್ಟು ಬೆಳೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಇದೇ ವೇಳೆ ತಮ್ಮ ಸಹೋದರ ದಿವಂಗತ ಅಡ್ಕಾಡಿ ಜಗನ್ನಾಥ ಗೌಡ ಅವರ ಆದರ್ಶ ವ್ಯಕ್ತಿತ್ವವನ್ನು ಸ್ಮರಿಸಿ, ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ಸಮಾಜದ ಪ್ರತಿಯೊಬ್ಬರ ಹೊಣೆಗಾರಿಕೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಾಮನ ತಮನ್ಕರ್ ಮಾತನಾಡಿ, ಗುರು-ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುವುದು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಅವಿನಾಶ್ ಭಿಡೆ ಶಾಲೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಯ್ಯ ಶೆಟ್ಟಿ ಮಾತನಾಡಿ, ಸರ್ಕಾರಿ ಶಾಲೆಗಳು ಉತ್ತಮ ಫಲಿತಾಂಶ ನೀಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ ಮಾತನಾಡಿ, ಉತ್ತಮ ಫಲಿತಾಂಶದ ಹಿಂದೆ ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಸಮರ್ಪಣೆ, ಪೋಷಕರ ಸಹಕಾರ, ಎಸ್‌ಡಿಎಂಸಿ, ಹಿರಿಯ ವಿದ್ಯಾರ್ಥಿ ಸಮಿತಿ ಹಾಗೂ ವಿದ್ಯಾಭಿಮಾನಿಗಳ ಬೆಂಬಲ ಪ್ರಮುಖ ಕಾರಣವಾಗಿದೆ ಎಂದು ಸ್ಮರಿಸಿದರು. ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರಿಗೆ ಅತ್ಯಂತ ದೊಡ್ಡ ಹೆಮ್ಮೆಯಾಗಿದ್ದು, ಅದಕ್ಕೆ ಸಿಗುವ ಪ್ರೋತ್ಸಾಹ ಹಾಗೂ ಮೆಚ್ಚುಗೆಯೇ ಶಿಕ್ಷಕರಿಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಗಣೇಶ್, ಸರೋಜಿನಿ ನಾಯ್ಕ ಸೇರಿದಂತೆ ಹಲವರು ಶುಭ ಹಾರೈಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಕಿಶೋರ್ ಶೆಟ್ಟಿ ಸಮರ್ಥವಾಗಿ ನಡೆಸಿಕೊಟ್ಟರು. ಹಿರಿಯರಾದ ಸತೀಶ್ ಶೆಟ್ಟಿ ಗುತ್ತು ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷರು, ಸದಸ್ಯರು, ಅಶ್ವಮೇಧಾ ಫ್ರೆಂಡ್ಸ್ ಸದಸ್ಯರು, ಛಾಯಾಗ್ರಾಹಕ ಪ್ರಕಾಶ್, ಪೋಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಚೇತನಾ ಕುಮಾರಿ ಎಸ್. ಸ್ವಾಗತಿಸಿದರು. ಶ್ರೀಚೇತನಾ ಬಿ.ಎಂ. ವಂದಿಸಿದರು.

 

Leave a Reply

error: Content is protected !!