ಕೊಕ್ಕಡ: ಶಾಲೆತಡ್ಕ ಶಾಲೆಯಲ್ಲಿ ನೂತನ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ

ಶೇರ್ ಮಾಡಿ

 

ಕೊಕ್ಕಡ: ಶಾಲೆತಡ್ಕ ಶಾಲೆಯಲ್ಲಿ ನೂತನ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ

ಕೊಕ್ಕಡ: ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಪ್ರಜಾಪ್ರಭುತ್ವದ ಮೌಲ್ಯಗಳು, ನಾಯಕತ್ವ ಗುಣಗಳು ಹಾಗೂ ಹಕ್ಕು-ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಲು ಶಾಲಾ ಸಂಸತ್ತು ಪರಿಣಾಮಕಾರಿ ವೇದಿಕೆಯಾಗಿದೆ ಎಂದು ವೆಂಕಪ್ಪ ಗೌಡ ಅಭಿಪ್ರಾಯಪಟ್ಟರು.

ಕಳಂಜ ಗ್ರಾಮದ ಶಾಲೆತಡ್ಕ ಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿನ ಮಕ್ಕಳ ಸಂಸತ್ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭವು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ವೆಂಕಪ್ಪ ಗೌಡ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಹಾಗೂ ಸಂಸದೀಯ ವ್ಯವಸ್ಥೆಯ ಅರಿವು ಮೂಡಿಸುವಲ್ಲಿ ಶಾಲಾ ಸಂಸತ್ತಿನ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಪ್ರೌಢಶಾಲಾ ಮುಖ್ಯಶಿಕ್ಷಕ ಶ್ರೀಕೃಷ್ಣ ಎಚ್.ಎಸ್. ಅವರು ಪ್ರಸ್ತಾವಿಕವಾಗಿ ಮಾತನಾಡಿ, ಶಾಲಾ ಸಂಸತ್ತಿನ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಬಳಿಕ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರೊನಾಲ್ಡ್ ಮಿನೆಜಸ್ ಅವರು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.

ಪ್ರಾಥಮಿಕ ಶಾಲೆಯ ಮುಖ್ಯಮಂತ್ರಿಯಾಗಿ ಅನಿತಾ, ಉಪಮುಖ್ಯಮಂತ್ರಿಯಾಗಿ ಮನ್ವಿತ್ ಹಾಗೂ ಪ್ರೌಢಶಾಲೆಯ ಮುಖ್ಯಮಂತ್ರಿಯಾಗಿ ವೇದಿಕಾ, ಉಪಮುಖ್ಯಮಂತ್ರಿಯಾಗಿ ಧನುಷ್, ವಿದ್ಯಾ ಅಧಿಕಾರ ಸ್ವೀಕರಿಸಿದರು. ಜೊತೆಗೆ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ, ಆರೋಗ್ಯ ಹಾಗೂ ಗೃಹ ಖಾತೆಗಳ ಸಚಿವರೂ ಪ್ರಮಾಣವಚನ ಸ್ವೀಕರಿಸಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವ ಸಂಕಲ್ಪ ವ್ಯಕ್ತಪಡಿಸಿದರು.

ಅತಿಥಿಯಾಗಿ ಆಗಮಿಸಿದ್ದ ನಿಡ್ಲೆ ಕ್ಲಸ್ಟರ್‌ನ ಪ್ರತಿಮಾ ಅವರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ, ಶಾಲೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಪ್ರಮಾಣವಚನ ಸ್ವೀಕರಿಸಿದ ಶಾಲಾ ನಾಯಕರು ಮಾತನಾಡಿ, ಶಾಲೆಯಲ್ಲಿ ಶಿಸ್ತು, ಸ್ವಚ್ಛತೆ ಹಾಗೂ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿ ಉತ್ತಮ ಮಾದರಿ ವಿದ್ಯಾರ್ಥಿಗಳಾಗುವ ಪ್ರತಿಜ್ಞೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜು ವಹಿಸಿ ಶುಭಾಶಯಗಳನ್ನು ತಿಳಿಸಿದರು. ಸಮಾರಂಭದಲ್ಲಿ ಶಾಲೆಯ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರೌಢಶಾಲಾ ಶಿಕ್ಷಕಿ ಜಯಂತಿ ಸ್ವಾಗತಿಸಿದರು. ಗೌರವ ಶಿಕ್ಷಕಿ ಲಲಿತ ಕಾರ್ಯಕ್ರಮ ನಿರೂಪಿಸಿದರೆ, ಪ್ರಭಾಕರ್ ಜಿ. ವಂದಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕ ಸುಧೀರ್ ಕಾರ್ಯಕ್ರಮದ ಸಂಯೋಜನೆ ನಿರ್ವಹಿಸಿದರು.

 

Leave a Reply

error: Content is protected !!