ಇಂದಿನ ವಿದ್ಯಾರ್ಥಿಗಳೇ ನಾಳಿನ ಜವಾಬ್ದಾರಿಯುತ ನಾಯಕರು; ಮಾದಕ ವ್ಯಸನದಿಂದ ದೂರವಿರಿ -ಸುಖೇಶ್ ಉಪ್ಪಿನಂಗಡಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್








ನೆಲ್ಯಾಡಿ: ಬೆಥನಿ ವಿದ್ಯಾಸಂಸ್ಥೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ ಸಮಾರಂಭವು ವಿದ್ಯಾಸಂಸ್ಥೆ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸುಖೇಶ್ ಭಾಗವಹಿಸಿ ಮಾತನಾಡಿದ ಅವರು ಶಾಲಾ ಸಂಸತ್ತು ಕೇವಲ ಒಂದು ಹುದ್ದೆಯಲ್ಲ, ಅದು ಜವಾಬ್ದಾರಿಯುತ ನಾಯಕತ್ವವನ್ನು ಕಲಿಸುವ ವೇದಿಕೆಯಾಗಿದೆ. ಉತ್ತಮ ನಾಯಕನಾಗಲು ಪ್ರಾಮಾಣಿಕತೆ, ಶಿಸ್ತು, ಸೇವಾ ಮನೋಭಾವ ಮತ್ತು ಸಮಾಜದ ಬಗ್ಗೆ ಕಾಳಜಿ ಅತ್ಯಗತ್ಯ. ಇಂದು ನೀವು ಶಾಲೆಯಲ್ಲಿ ಕಲಿಯುವ ನಾಯಕತ್ವದ ಗುಣಗಳು ಭವಿಷ್ಯದಲ್ಲಿ ದೇಶದ ಅಭಿವೃದ್ಧಿಗೆ ಅಡಿಪಾಯವಾಗಲಿವೆ. ನಿಮ್ಮ ಪ್ರತಿಯೊಂದು ನಿರ್ಧಾರವೂ ಇತರರಿಗೆ ಮಾದರಿಯಾಗುವಂತಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ.ವರ್ಗೀಸ್ ಕೈಪನಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಫಾ.ಸ್ಯಾಮ್ಯುಯೆಲ್ ಜಾರ್ಜ್, ಸಹಕಾರ್ಯದರ್ಶಿ ಫಾ.ವರ್ಗೀಸ್.ಎಸ್., ಉಪಪ್ರಾಂಶುಪಾಲರಾದ ಜೋಸ್ ಎಂ.ಜೆ., ಮುಖ್ಯಶಿಕ್ಷಕ ಜಾರ್ಜ್ ಕೆ.ಥಾಮಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲಾ ಸಂಸತ್ತಿನ ಚುನಾಯಿತ ವಿದ್ಯಾರ್ಥಿಗಳು ತಮ್ಮ ಅಧಿಕಾರ ಹಾಗೂ ಜವಾಬ್ದಾರಿಗಳನ್ನು ಸೂಚಿಸುವ ಬ್ಯಾಡ್ಜ್‌ಗಳನ್ನು ಧರಿಸಿ ಅಧಿಕೃತವಾಗಿ ಅಪ್ರಮಾಣವಚನ ಸ್ವೀಕರಿಸಿದರು.
ಬಳಿಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸುಖೇಶ್ ಅವರು ವಿದ್ಯಾರ್ಥಿಗಳಿಗಾಗಿ ಮಾದಕ ದ್ರವ್ಯ ಮತ್ತು ತಂಬಾಕು ಬಳಕೆಯ ದುಷ್ಪರಿಣಾಮಗಳ ಕುರಿತು ವಿಶೇಷ ಓರಿಯಂಟೇಶನ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ವೇಳೆ ಮಾತನಾಡಿದ ಅವರು ಮಾದಕ ದ್ರವ್ಯ ಮತ್ತು ತಂಬಾಕು ವ್ಯಸನವು ವ್ಯಕ್ತಿಯ ಆರೋಗ್ಯವಷ್ಟೇ ಅಲ್ಲ, ಕುಟುಂಬ, ಸಮಾಜ ಮತ್ತು ದೇಶದ ಭವಿಷ್ಯವನ್ನೂ ಹಾಳುಮಾಡುವ ಮಾರಕ ಪಿಡುಗಾಗಿದೆ. ಸ್ನೇಹಿತರ ಒತ್ತಡಕ್ಕೆ ಅಥವಾ ಕುತೂಹಲಕ್ಕೆ ಬಲಿಯಾಗಿ ಯಾವುದೇ ದುಶ್ಚಟಗಳಿಗೆ ಒಳಗಾಗಬೇಡಿ. ನಿಮ್ಮ ಕನಸುಗಳು, ಶಿಕ್ಷಣ ಮತ್ತು ಜೀವನದ ಗುರಿಗಳನ್ನು ಕಾಪಾಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ತಪ್ಪು ಮಾರ್ಗವನ್ನು ಧೈರ್ಯವಾಗಿ ತಿರಸ್ಕರಿಸಿ, ಉತ್ತಮ ನಾಗರಿಕರಾಗಿ ಸಮಾಜಕ್ಕೆ ಮಾದರಿಯಾಗಬೇಕು, ವಿದ್ಯಾರ್ಥಿಗಳು ಮಾದಕ ವ್ಯಸನ ಮುಕ್ತ ಜೀವನವನ್ನು ಅಳವಡಿಸಿಕೊಂಡು ಆರೋಗ್ಯಕರ ಮತ್ತು ಜವಾಬ್ದಾರಿಯುತ ಭವಿಷ್ಯ ನಿರ್ಮಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಜಾರ್ಜ್ ಕೆ. ಥಾಮಸ್ ಸ್ವಾಗತಿಸಿ ವಂದಿಸಿದರು.



