ಮೇಲ್ಚಾವಣಿಯಿಂದ ನೀರು ಸೋರಿಕೆ, ತರಗತಿ ಕೊಠಡಿಗಳ ಕೊರತೆ, ಶೌಚಾಲಯ–ನೀರಿನ ಸಮಸ್ಯೆ; 100ಕ್ಕೂ ಹೆಚ್ಚು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಕಷ್ಟ – ತಕ್ಷಣ ಕ್ರಮಕ್ಕೆ ಪೋಷಕರ ಆಗ್ರಹ








ಕೊಕ್ಕಡ: ಶಿಕ್ಷಣದ ಗುಣಮಟ್ಟದಲ್ಲಿ ಉತ್ತಮ ಹೆಸರು ಗಳಿಸಿಕೊಂಡು ಗ್ರಾಮಸ್ಥರ ಹಾಗೂ ಪೋಷಕರ ವಿಶ್ವಾಸವನ್ನು ಸಂಪಾದಿಸಿರುವ ಕೊಕ್ಕಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳ್ಳಿಂಗೇರಿ ಇಂದು ಮೂಲಸೌಕರ್ಯಗಳ ಕೊರತೆಯಿಂದ ತೀವ್ರ ಸಂಕಷ್ಟವನ್ನು ಎದುರಿಸುತ್ತಿದೆ. ಒಂದರಿಂದ ಏಳನೇ ತರಗತಿಯವರೆಗೆ ಸುಮಾರು 100 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಈ ಶಾಲೆಯಲ್ಲಿ ಶಿಕ್ಷಕರ ಬದ್ಧ ಸೇವೆ ಇದ್ದರೂ, ಶಿಥಿಲ ಕಟ್ಟಡಗಳು ಮತ್ತು ಅಪೂರ್ಣ ಸೌಲಭ್ಯಗಳು ಮಕ್ಕಳ ಸುರಕ್ಷತೆ ಹಾಗೂ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ.

ಶಾಲೆಯಲ್ಲಿ ಏಳು ತರಗತಿಗಳಿಗೆ ಕನಿಷ್ಠ ಏಳು ಪ್ರತ್ಯೇಕ ಕೊಠಡಿಗಳ ಅಗತ್ಯವಿದ್ದರೂ ಪ್ರಸ್ತುತ ಕೇವಲ ಐದು ಕೊಠಡಿಗಳಷ್ಟೇ ಲಭ್ಯವಿವೆ. ಇದರಿಂದ ಒಂದೇ ಕೊಠಡಿಯಲ್ಲಿ ಎರಡು ತರಗತಿಗಳನ್ನು ಸೇರಿಸಿ ಪಾಠ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳ ಏಕಾಗ್ರತೆ ಹಾಗೂ ಕಲಿಕೆಯ ಗುಣಮಟ್ಟಕ್ಕೆ ಧಕ್ಕೆಯಾಗುತ್ತಿದೆ. ಮಳೆಗಾಲ ಆರಂಭವಾದರೆ ಶಾಲೆಯ ದುಸ್ಥಿತಿ ಮತ್ತಷ್ಟು ಬಯಲಾಗುತ್ತದೆ. ತರಗತಿ ಕೊಠಡಿಗಳ ಮೇಲ್ಚಾವಣಿಯಿಂದ ಎಲ್ಲೆಡೆ ನೀರು ಸೋರುತ್ತಿದ್ದು, ಮಕ್ಕಳು ಪುಸ್ತಕ–ಚೀಲಗಳನ್ನು ಕಾಪಾಡಿಕೊಳ್ಳುತ್ತಲೇ ಪಾಠ ಕೇಳುವ ಸ್ಥಿತಿ ಎದುರಾಗಿದೆ. ತಾರಸಿಯ ಮೇಲ್ಭಾಗದಲ್ಲಿ ಕೆಲವೆಡೆ ಶೀಟ್ ಅಳವಡಿಸಿದ್ದರೂ ಉಳಿದ ಭಾಗಗಳಿಂದ ಮಳೆಯ ನೀರು ಹರಿದು ಬಂದು ಸಂಪೂರ್ಣ ಕಟ್ಟಡವೇ ಸೋರಿಕೆಗೆ ಒಳಗಾಗುತ್ತಿದೆ. ಅನೇಕ ಕಡೆ ಗೋಡೆಗಳು ಮತ್ತು ಮೇಲ್ಚಾವಣಿಗಳು ಬಿರುಕು ಬಿಟ್ಟಿರುವುದರಿಂದ ಕಟ್ಟಡದ ಸುರಕ್ಷತೆ ಪ್ರಶ್ನಾರ್ಥಕವಾಗಿದೆ.
ಶಾಲೆಯ ವಿವಿಧ ಕೊಠಡಿಗಳು 2004, 2007, 2009–10 ಹಾಗೂ 2012–13ರ ಅವಧಿಯಲ್ಲಿ ಹಂತ ಹಂತವಾಗಿ ನಿರ್ಮಾಣಗೊಂಡಿದ್ದರೂ, ಕಳಪೆ ಗುಣಮಟ್ಟದ ಕಾಮಗಾರಿಯಿಂದ ಅವು ಅತ್ಯಂತ ಕಡಿಮೆ ಅವಧಿಯಲ್ಲೇ ಶಿಥಿಲಗೊಂಡಿವೆ ಎಂಬ ಆರೋಪ ಕೇಳಿಬಂದಿದೆ. ಗೋಡೆಗಳ ಬಿರುಕು, ಮೇಲ್ಚಾವಣಿಯ ಹಾನಿ ಹಾಗೂ ನೀರು ಸೋರಿಕೆಯಿಂದ ಯಾವುದೇ ಕ್ಷಣದಲ್ಲಿ ಅನಾಹುತ ಸಂಭವಿಸುವ ಭೀತಿ ಶಿಕ್ಷಕರು ಮತ್ತು ಪೋಷಕರನ್ನು ಕಾಡುತ್ತಿದೆ.
ಶೌಚಾಲಯ ಮತ್ತು ನೀರಿನ ಸಮಸ್ಯೆ ತೀವ್ರ
ಸುಮಾರು 100 ವಿದ್ಯಾರ್ಥಿಗಳಿಗೆ ಕೇವಲ ಎರಡು ಶೌಚಾಲಯಗಳು ಮಾತ್ರ ಬಳಕೆಗೆ ಯೋಗ್ಯವಾಗಿದ್ದು, ಇದು ಮಕ್ಕಳಿಗೆ ದೊಡ್ಡ ಸಮಸ್ಯೆಯಾಗಿದೆ. ವಿಶೇಷವಾಗಿ ಬಾಲಕಿಯರಿಗೆ ಅಗತ್ಯ ಸೌಲಭ್ಯಗಳ ಕೊರತೆ ಶಿಕ್ಷಣದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಬೇಸಿಗೆ ಕಾಲದಲ್ಲಿ ಶಾಲೆಯ ಬಾವಿ ಮತ್ತು ಬೋರ್‌ವೆಲ್‌ಗಳಲ್ಲಿ ನೀರು ಬತ್ತಿಹೋಗುವುದರಿಂದ ಕ್ಷೀರಭಾಗ್ಯ, ಅಕ್ಷರ ದಾಸೋಹ ಹಾಗೂ ಶೌಚಾಲಯಗಳ ನಿರ್ವಹಣೆಯೂ ಸಂಕಷ್ಟಕ್ಕೆ ಸಿಲುಕುತ್ತದೆ. ಕುಡಿಯುವ ನೀರಿನ ಸಮಸ್ಯೆಯೂ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಕಂಗೆಡಿಸಿದೆ.
ಶಿಕ್ಷಕರಿಗೆ ಕೊಠಡಿಯೇ ಇಲ್ಲ:
ತರಗತಿ ಕೊಠಡಿಗಳ ಕಿಟಕಿ ಹಾಗೂ ಬಾಗಿಲುಗಳು ಸರಿಯಾಗಿ ಮುಚ್ಚಲಾಗದ ಸ್ಥಿತಿಯಲ್ಲಿದ್ದು, ತುರ್ತು ದುರಸ್ತಿ ಅಗತ್ಯವಾಗಿದೆ. ಮುಖ್ಯ ಶಿಕ್ಷಕರು ಹಾಗೂ ಇತರ ಶಿಕ್ಷಕರಿಗೆ ಪ್ರತ್ಯೇಕ ಸಿಬ್ಬಂದಿ ಕೊಠಡಿ ಇಲ್ಲದ ಕಾರಣ ಒಂದು ತರಗತಿ ಕೊಠಡಿಯನ್ನೇ ಕಚೇರಿಯಾಗಿ ಬಳಸಿಕೊಳ್ಳಬೇಕಾಗಿದೆ.
ಪ್ರಗತಿಯತ್ತ ಸಾಗುತ್ತಿರುವ ಶಾಲೆಗೆ ಮೂಲಸೌಕರ್ಯವೇ ದೊಡ್ಡ ಅಡ್ಡಿ:
ಈ ವರ್ಷ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಶಿಬಿರವೂ ಇಲ್ಲಿ ಆಯೋಜಿಸಲಾಗಿತ್ತು. ಶಾಲೆ ತನ್ನ ಬೆಳ್ಳಿ ಹಬ್ಬದ ಸಂಭ್ರಮದತ್ತ ಹೆಜ್ಜೆ ಇಡುತ್ತಿರುವ ಈ ಸಂದರ್ಭದಲ್ಲಿ ಅಗತ್ಯ ಮೂಲಸೌಕರ್ಯಗಳ ಕೊರತೆ ಮಾತ್ರ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.
ಪ್ರಸ್ತುತ ಶಾಲೆಯಲ್ಲಿ ಮುಖ್ಯ ಶಿಕ್ಷಕರನ್ನು ಸೇರಿಸಿ ನಾಲ್ವರು ಕಾಯಂ ಶಿಕ್ಷಕರು ಹಾಗೂ ಒಬ್ಬ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಸೀಮಿತ ಸೌಲಭ್ಯಗಳ ನಡುವೆಯೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದ್ದಾರೆ.
ತಕ್ಷಣದ ಕ್ರಮಕ್ಕೆ ಆಗ್ರಹ:
ಶಿಕ್ಷಣದ ಗುಣಮಟ್ಟದಲ್ಲಿ ಮುಂಚೂಣಿಯಲ್ಲಿರುವ ಈ ಶಾಲೆಯ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಹಾಗೂ ದಾನಿಗಳು ತುರ್ತು ಗಮನಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹೊಸ ತರಗತಿ ಕೊಠಡಿಗಳ ನಿರ್ಮಾಣ, ಶಿಥಿಲ ಕಟ್ಟಡಗಳ ಪುನರ್‌ನಿರ್ಮಾಣ, ಹೆಚ್ಚುವರಿ ಶೌಚಾಲಯ, ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶಿಕ್ಷಕರ ಕೊಠಡಿ ನಿರ್ಮಾಣ ಸೇರಿದಂತೆ ಸಮಗ್ರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳದಿದ್ದರೆ, ನೂರಾರು ಮಕ್ಕಳ ಭವಿಷ್ಯವೇ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ಮಳೆ ಬಂದರೆ ಮಕ್ಕಳು ಪಾಠ ಕೇಳುವುದಕ್ಕಿಂತ ನೀರು ತಪ್ಪಿಸಿಕೊಳ್ಳುವುದೇ ದೊಡ್ಡ ಕೆಲಸವಾಗುತ್ತದೆ. ಇಂತಹ ಶಿಥಿಲ ಕಟ್ಟಡದಲ್ಲಿ ಮಕ್ಕಳನ್ನು ಕಳುಹಿಸುವುದು ಪೋಷಕರಾಗಿ ನಮಗೆ ಭಯ ಹುಟ್ಟಿಸುತ್ತಿದೆ. ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ಸರ್ಕಾರ ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ತುರ್ತಾಗಿ ಇರುವ ಕಟ್ಟಡಕ್ಕೆ ಮೇಲ್ಚಾವಣಿಯನ್ನು ನಿರ್ಮಿಸುವುದು ಹಾಗೂ ಕೊಠಡಿಗಳ ಸಂಖ್ಯೆ ಕಡಿಮೆ ಇರುವುದರಿಂದ ಹೊಸ ಕಟ್ಟಡ ತುರ್ತಾಗಿ ನಿರ್ಮಿಸಬೇಕಾಗಿದೆ.
-ನವಾಜ್.ಎಂ.ಎಸ್., ಅಧ್ಯಕ್ಷರು ಶಾಲಾ ಅಭಿವೃದ್ಧಿ ಸಮಿತಿ ಹಳ್ಳಿಂಗೇರಿ
ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಕನಸಿನಿಂದ ಶಾಲೆಗೆ ಕಳುಹಿಸುತ್ತಿದ್ದೇವೆ. ಆದರೆ ಶೌಚಾಲಯ, ನೀರು, ತರಗತಿ ಕೊಠಡಿ ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲದಿರುವುದು ನೋವುಂಟು ಮಾಡುತ್ತದೆ. ಜನಪ್ರತಿನಿಧಿಗಳು, ದಾನಿಗಳು ಮತ್ತು ಶಿಕ್ಷಣ ಇಲಾಖೆ ಕೂಡಲೇ ಅನುದಾನ ನೀಡಿ ಶಾಲೆಯನ್ನು ಮಾದರಿ ಶಾಲೆಯಾಗಿ ಅಭಿವೃದ್ಧಿಪಡಿಸಬೇಕು.
-ಹೇಮಾವತಿ, ಉಪಾಧ್ಯಕ್ಷರು ಶಾಲಾ ಅಭಿವೃದ್ಧಿ ಸಮಿತಿ ಹಳ್ಳಿಂಗೇರಿ
ತಾಲೂಕು ಪಂಚಾಯಿತಿ ಲಿಂಕ್ ಡಾಕ್ಯೂಮೆಂಟ್ ಅನುದಾನ ಹಾಗೂ ಅನಿರ್ಬಂಧಿತ ಅನುದಾನ, ಶಾಲಾ ಶಿಕ್ಷಣ ಅನುದಾನದ ಮೂಲಕ ಅತೀ ಅಗತ್ಯವಿರುವ ಶಾಲೆಗಳ ಆದ್ಯತ ಮೇರೆಗೆ ಅನುದಾನವನ್ನು ನೀಡಿ ತುರ್ತು ಕಾಮಗಾರಿಗಳನ್ನು ನಡೆಸಲಿದ್ದೇವೆ.
-ಭವಾನಿ ಶಂಕರ್ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ,ಬೆಳ್ತಂಗಡಿ



