







ಬೆಳ್ತಂಗಡಿ: ಇಳಂತಿಲ ಗ್ರಾಮದಲ್ಲಿ 2023ರ ಮಾರ್ಚ್ 20ರಂದು ನಡೆದ ₹10 ಲಕ್ಷ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಬೆಳ್ತಂಗಡಿ ಹಿರಿಯ ಸಿವಿಲ್ ನ್ಯಾಯಾಲಯ ಹಾಗೂ ಜೆಎಂಎಫ್‌ಸಿ ನ್ಯಾಯಾಲಯವು ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಕಾಯರ್ಪಾಡಿ ನಿವಾಸಿ ಮಹಮ್ಮದ್ ಕೆ. ಅವರು ತಮ್ಮ ಮಗಳ ಮದುವೆಗಾಗಿ ಸಾಲ ರೂಪದಲ್ಲಿ ಸಂಗ್ರಹಿಸಿಟ್ಟಿದ್ದ ₹10 ಲಕ್ಷ ಹಣವನ್ನು ತಮ್ಮ ಸ್ಕೂಟರ್‌ನ ಸೀಟಿನಡಿ ಇಡುವ ವೇಳೆ, ಹಿಂದಿನಿಂದ ಬಂದ ರಿಫೈನ್ ನಗರದ ಕಡವಿನ ಬಾಗಿಲು ನಿವಾಸಿ ರಾಜೀಮ್ ಹಣದ ಕಟ್ಟನ್ನು ದರೋಡೆ ಮಾಡಿದ್ದಾನೆ. ಬಳಿಕ ಆತ ದರೋಡೆ ಮಾಡಿದ ಹಣವನ್ನು ಕೊಕ್ಕಡದ ಮುಸ್ತಾಫ ಎಂಬಾತನಿಗೆ ನೀಡಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿತ್ತು.
ಘಟನೆ ಸಂಬಂಧ ಮಹಮ್ಮದ್ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆಯನ್ನು ಅಂದಿನ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್. ನಡೆಸಿ, ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಬೆಳ್ತಂಗಡಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಮನು ಬಿ.ಕೆ. ಅವರು ದರೋಡೆ ನಡೆಸಿದ ರಾಜೀಮ್ ಹಾಗೂ ಕೃತ್ಯಕ್ಕೆ ಸಹಕರಿಸಿದ ಮುಸ್ತಾಫ ಇಬ್ಬರೂ ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಮಾನಿಸಿ, ತಲಾ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಟ್ಟು ₹20 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.
ಇದಲ್ಲದೆ, ವಿಧಿಸಲಾದ ದಂಡದ ಮೊತ್ತದಲ್ಲಿ ₹10 ಸಾವಿರವನ್ನು ದೂರುದಾರ ಮಹಮ್ಮದ್ ಅವರಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.



