ಉಪ್ಪಿನಂಗಡಿ: ಹಾಸನದಿಂದ ಕೇರಳಕ್ಕೆ ಅಕ್ರಮ ಜಾನುವಾರು ಸಾಗಾಟ ಪತ್ತೆ: 16 ಜಾನುವಾರುಗಳೊಂದಿಗೆ ಈಚರ್ ಲಾರಿ ವಶ, ಮೂವರ ವಿರುದ್ಧ ಪ್ರಕರಣ ದಾಖಲು

ಶೇರ್ ಮಾಡಿ

 

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ-75ರ ನೆಕ್ಕಿಲಾಡಿ ಗ್ರಾಮದ ಆನೆಬೈಲು ಸಮೀಪ ಉಪ್ಪಿನಂಗಡಿ ಪೊಲೀಸರು ನಡೆಸಿದ ವಾಹನ ತಪಾಸಣೆ ವೇಳೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಈಚರ್ ಲಾರಿಯನ್ನು ವಶಪಡಿಸಿಕೊಂಡು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಜೂನ್ 17ರಂದು ಬೆಳಿಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸುತೇಶ್ ಕೆ.ಪಿ. ಅವರು ಸಿಬ್ಬಂದಿಗಳೊಂದಿಗೆ ಉಪ್ಪಿನಂಗಡಿ, ಮಠ ಹಾಗೂ ನೆಕ್ಕಿಲಾಡಿ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಆನೆಬೈಲು ಪ್ರದೇಶದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಹಾಸನ ಕಡೆಯಿಂದ ಬರುತ್ತಿದ್ದ ಈಚರ್ ಲಾರಿಯನ್ನು ತಡೆದು ಪರಿಶೀಲಿಸಿದಾಗ ಅದರೊಳಗೆ 16 ಜಾನುವಾರುಗಳನ್ನು ಯಾವುದೇ ದಾಖಲಾತಿಗಳಿಲ್ಲದೆ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಲಾರಿ ಚಾಲಕ ಕಡೂರು ನಿವಾಸಿ ಪರ್ದಿನ್ ಖಾನ್(24), ವಾಹನದಲ್ಲಿದ್ದ ಮತ್ತೋರ್ವ ಆರೋಪಿ ಹಾಸನ ಜಿಲ್ಲೆಯ ಹೋಳೆನರಸಿಪುರ ತಾಲೂಕಿನ ನಿವಾಸಿ ಜಾವೀದ್ ಪಾಷಾ(34) ಎಂದು ಗುರುತಿಸಲಾಗಿದೆ. ವಾಹನ ತಪಾಸಣೆ ವೇಳೆ ಅವರೊಂದಿಗೆ ಇದ್ದ ರೆಹಮಾನ್ ಹೊಸೂರು ಎಂಬಾತ ಪೊಲೀಸರನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ವಿಚಾರಣೆ ವೇಳೆ ಆರೋಪಿಗಳು ಹಾಸನ ಸಂತೆಯಿಂದ ಜಾನುವಾರುಗಳನ್ನು ಖರೀದಿಸಿ ಕೇರಳ ರಾಜ್ಯದ ಪಾಲಕ್ಕಾಡ್‌ಗೆ ಸಾಗಿಸುತ್ತಿರುವುದಾಗಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಲಾರಿಯಲ್ಲಿ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

10 ತಿಳಿ ಕಪ್ಪು ಬಣ್ಣದ, 2 ಬಿಳಿ ಬಣ್ಣದ, 2 ತಿಳಿ ಕಂದು ಬಣ್ಣದ ಹಾಗೂ 2 ಕಪ್ಪು-ಬಿಳಿ ಮಿಶ್ರಿತ ಬಣ್ಣದ ಜಾನುವಾರುಗಳು ಪತ್ತೆಯಾಗಿದ್ದು, ಅವುಗಳ ಒಟ್ಟು ಅಂದಾಜು ಮೌಲ್ಯ ರೂ.1.20 ಲಕ್ಷ ಎಂದು ಅಂದಾಜಿಸಲಾಗಿದೆ. ಸಾಗಾಟಕ್ಕೆ ಬಳಸಿದ್ದ ಈಚರ್ ಲಾರಿ ಸೇರಿ ವಶಪಡಿಸಿಕೊಂಡ ಜಾನುವಾರುಗಳು ಹಾಗೂ ವಾಹನದ ಮೌಲ್ಯ ರೂ.11.20 ಲಕ್ಷ ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

 

Leave a Reply

error: Content is protected !!