







ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಕಡಬ ಇದರ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕ ಕೋರ್ ಕಮಿಟಿ ಸಭೆಯು ಕಡಬದ ಶ್ರೀ ಜಯದುರ್ಗಾ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದ.ಕ.ಜಿಲ್ಲಾ ನಿರ್ದೇಶಕರಾದ ಎ.ಬಾಬು ನಾಯ್ಕ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಯುತ್ತಿರುವ ಶೌರ್ಯ ಕಾರ್ಯಕ್ರಮವು ಕಡಬ ತಾಲೂಕಿನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದು, ಸಮಾಜಮುಖಿ ಕಾರ್ಯಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶ್ಲಾಘಿಸಿದರು.
ಶೌರ್ಯ ಕಾರ್ಯಕ್ರಮದ ಯೋಜನಾಧಿಕಾರಿಗಳಾದ ಜೈವಂತ್ ಪಟಗಾರ ಅವರು ಶೌರ್ಯ ಕಾರ್ಯಕ್ರಮದ ಆಶಯ ಮತ್ತು ಉದ್ದೇಶಗಳ ಕುರಿತು ವಿವರಿಸಿದರು. ಜೊತೆಗೆ ತಾಲೂಕಿನ ಶೌರ್ಯ ಘಟಕಗಳ ಮಾಸಿಕ ಸಭೆಗಳು, ಶ್ರಮದಾನ ಚಟುವಟಿಕೆಗಳು ಹಾಗೂ ಘಟಕಗಳ ಬಲವರ್ಧನೆ ಕುರಿತಂತೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.
ಕಡಬ ತಾಲೂಕಿನ ಯೋಜನಾಧಿಕಾರಿಗಳಾದ ಪ್ರಕಾಶ್ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶೌರ್ಯ ಘಟಕಗಳ ಕಾರ್ಯಚಟುವಟಿಕೆಗಳು ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ 25 ಸದಸ್ಯರನ್ನೊಳಗೊಂಡ ವಿಶೇಷ ತುರ್ತು ಸ್ಪಂದನಾ ಘಟಕವನ್ನು ರಚಿಸಲಾಯಿತು.
ಕಾರ್ಯಕ್ರಮದಲ್ಲಿ ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಮೇಲ್ವಿಚಾರಕರಾದ ನಿತೇಶ್ ಕೆ., ಕಡಬ ತಾಲೂಕಿನ ವಿವಿಧ ಮೇಲ್ವಿಚಾರಕರು, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕರು, ಘಟಕ ಪ್ರತಿನಿಧಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಡಬ ವಲಯದ ಮೇಲ್ವಿಚಾರಕರಾದ ವಿಜೇಶ್ ಜೈನ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕರಾದ ಸೋಮೇಶ್ ವಂದಿಸಿದರು.



