ಕಡಬ: ತಾಲೂಕಿನಲ್ಲಿ ಮೊದಲ ಅತಿಸೂಕ್ಷ್ಮ ರಂಧ್ರ ವಿಧಾನ ಭುಜದ ಸ್ಥಿರೀಕರಣ ಶಸ್ತ್ರಚಿಕಿತ್ಸೆ ಯಶಸ್ವಿ; ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ಮಹತ್ವದ ಸಾಧನೆ

ಶೇರ್ ಮಾಡಿ

 

ಕಡಬ ತಾಲೂಕಿನಲ್ಲಿ ಮೊದಲ ಅತಿಸೂಕ್ಷ್ಮ ರಂಧ್ರ ವಿಧಾನ ಭುಜದ ಸ್ಥಿರೀಕರಣ
ಶಸ್ತ್ರಚಿಕಿತ್ಸೆ ಯಶಸ್ವಿ; ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ಮಹತ್ವದ ಸಾಧನೆ

ನೆಲ್ಯಾಡಿ: ಕಡಬ ತಾಲೂಕಿನ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿರುವ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಯಲ್ಲಿ 28 ವರ್ಷದ ಯುವಕನಿಗೆ ಭುಜದ ಮರುಜಾರುವಿಕೆ ಸಮಸ್ಯೆಗೆ ತಾಲೂಕಿನಲ್ಲೇ ಮೊದಲ ಬಾರಿಗೆ ಅತಿಸೂಕ್ಷ್ಮ ರಂಧ್ರ (ಕೀಹೋಲ್) ವಿಧಾನದ ಭುಜದ ಸ್ಥಿರೀಕರಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ರೋಗಿಯು ದೀರ್ಘಕಾಲದಿಂದ ಭುಜದ ಮರುಜಾರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದು, ಇದರಿಂದ ಭುಜದಲ್ಲಿ ಅಸ್ಥಿರತೆ ಮತ್ತು ನಿರಂತರ ನೋವು ಕಾಣಿಸಿಕೊಳ್ಳುತ್ತಿತ್ತು. ವೈದ್ಯರ ತಂಡ ಅತಿಸೂಕ್ಷ್ಮ ರಂಧ್ರಗಳ ಮೂಲಕ ನಡೆಸುವ ಆಧುನಿಕ ಶಸ್ತ್ರಚಿಕಿತ್ಸೆಯ ಮೂಲಕ ಹಾನಿಗೊಳಗಾದ ಮೃದುಕಣಜಗಳು ಮತ್ತು ಬಂಧಕ ಕಣಜಗಳನ್ನು (ಲಿಗಮೆಂಟ್‌ಗಳು) ದುರಸ್ತಿ ಮಾಡಿ ಭುಜವನ್ನು ಪುನಃ ಸ್ಥಿರಗೊಳಿಸಿದೆ. ಇದರಿಂದ ರೋಗಿಯ ನೋವು ಕಡಿಮೆಯಾಗುವುದರ ಜೊತೆಗೆ ಭುಜದ ಸಾಮಾನ್ಯ ಕಾರ್ಯಕ್ಷಮತೆ ಸುಧಾರಿಸಲಿದೆ.

ಈ ವಿಧಾನವು ಅತ್ಯಾಧುನಿಕ ಶಸ್ತ್ರಚಿಕಿತ್ಸಾ ತಂತ್ರಜ್ಞಾನವಾಗಿದ್ದು, ಕಡಿಮೆ ನೋವು, ಕಡಿಮೆ ರಕ್ತಸ್ರಾವ, ಆಸ್ಪತ್ರೆಯಲ್ಲಿ ಕಡಿಮೆ ದಿನಗಳ ವಾಸ ಮತ್ತು ಶೀಘ್ರ ಚೇತರಿಕೆಗೆ ನೆರವಾಗುತ್ತದೆ.

ಶಸ್ತ್ರಚಿಕಿತ್ಸೆಯನ್ನು ಡಾ.ಶರತ್ ಬಾಳೆಮನೆ, ಡಾ.ಶಮಂತ್ ವೈ.ಕೆ. ಹಾಗೂ ಡಾ. ಲೋಕೇಶ್ ಅವರ ತಂಡ ಯಶಸ್ವಿಯಾಗಿ ನೆರವೇರಿಸಿದೆ. ಅಗತ್ಯ ವೈದ್ಯಕೀಯ ಸಾಧನಗಳ ಸಹಕಾರವನ್ನು ಮೋಹನ್ ನೀಡಿದ್ದು, ಶುಶ್ರೂಷಾ ಸಿಬ್ಬಂದಿಗಳಾದ ಲೀಲಾವತಿ, ಬಿನ್ಸಿ ಮತ್ತು ರೂಪಾ ಅವರ ಸೇವೆಯೂ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದೆ.

ಈ ಸಾಧನೆಯು ಕಡಬ ತಾಲೂಕಿನ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಅತ್ಯಾಧುನಿಕ ಅಸ್ಥಿರೋಗ ಚಿಕಿತ್ಸೆಯನ್ನು ಸ್ಥಳೀಯ ಜನತೆಗೆ ತಮ್ಮ ಊರಿನಲ್ಲಿಯೇ ಪಡೆಯುವ ಅವಕಾಶ ಕಲ್ಪಿಸಿದೆ ಎಂದು ಅಶ್ವಿನಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಮುರಳೀಧರ ವೈ.ಕೆ. ಹೇಳಿದರು .

 

Leave a Reply

error: Content is protected !!