







ನೆಲ್ಯಾಡಿ: ಅಂತಾರಾಷ್ಟ್ರೀಯ ವಿಶ್ವ ಯೋಗ ದಿನದ ಅಂಗವಾಗಿ ನೆಲ್ಯಾಡಿಯ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯೋಗ ಮತ್ತು ನ್ಯಾಚುರೋಪತಿ ವಿದ್ಯಾರ್ಥಿನಿ ಹಾಗೂ ಯೋಗ ಶಿಕ್ಷಕಿ ಕು.ಭಾವನಾ ಅವರು ಮಾತನಾಡಿ, ಯೋಗವು ದೇಹ ಮತ್ತು ಮನಸ್ಸನ್ನು ಒಂದಾಗಿಸುವ ಜೀವನ ಪದ್ಧತಿಯಾಗಿದ್ದು, ಆರೋಗ್ಯಕರ ಬದುಕಿಗೆ ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು. ಯೋಗಾಭ್ಯಾಸದಿಂದ ಮಾನಸಿಕ ನೆಮ್ಮದಿ, ದೈಹಿಕ ಆರೋಗ್ಯ ಹಾಗೂ ಆಧ್ಯಾತ್ಮಿಕ ಬೆಳವಣಿಗೆಯನ್ನು ಸಾಧಿಸಬಹುದಾಗಿದ್ದು, ಇಂದಿನ ಒತ್ತಡದ ಬದುಕಿನಲ್ಲಿ ಪ್ರತಿಯೊಬ್ಬರೂ ಯೋಗವನ್ನು ತಮ್ಮ ದಿನನಿತ್ಯದ ಜೀವನದ ಭಾಗವನ್ನಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. ಯೋಗಾಭ್ಯಾಸದ ಮೂಲಕ ಆರೋಗ್ಯಕರ ಜೀವನವನ್ನು ನಡೆಸುವ ಸಂಕಲ್ಪವನ್ನು ಎಲ್ಲರೂ ಕೈಗೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೆ.ಫಾ.ಸ್ಯಾಮುಲ್ ಜಾರ್ಜ್ ಅವರು ವಿಶ್ವ ಯೋಗ ದಿನಾಚರಣೆಯ ಮಹತ್ವವನ್ನು ವಿವರಿಸಿ ಶುಭ ಹಾರೈಸಿದರು. ಸಂಸ್ಥೆಯ ಪ್ರಾಚಾರ್ಯರಾದ ಸಜಿ ಕೆ.ಥೋಮಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭಾಶಯ ಕೋರಿದರು.
ಕಳೆದ ಒಂದು ವಾರದಿಂದ ಉಜಿರೆಯ ಯೋಗ ಮತ್ತು ನ್ಯಾಚುರೋಪತಿ ವಿದ್ಯಾಲಯದ ವಿದ್ಯಾರ್ಥಿಗಳ ತಂಡವು ಐಟಿಐ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದ್ದು, ಅದರ ಸಮಾರೋಪ ಕಾರ್ಯಕ್ರಮವಾಗಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.
ಸಂಸ್ಥೆಯ ಹಿರಿಯ ತರಬೇತಿ ಅಧಿಕಾರಿಯಾದ ಸುಬ್ರಾಯ ನಾಯಕ್ ಅವರು ಕಾರ್ಯಕ್ರಮದ ಸಂಯೋಜನೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.



