ಸವಣೂರು: ವಿದ್ಯಾಸಂಸ್ಥೆಯಲ್ಲಿ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮ

ಶೇರ್ ಮಾಡಿ

ಮಾದಕ ವ್ಯಸನದಿಂದ ದೂರವಿರಿ; ಶಿಕ್ಷಣ, ಶಿಸ್ತು ಮತ್ತು ಉತ್ತಮ ಜೀವನಕ್ಕೆ ಆದ್ಯತೆ ನೀಡಿ: ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ

 

ಸವಣೂರು:  ವಿದ್ಯಾಸಂಸ್ಥೆಯಲ್ಲಿ 'ಸ್ವಾಸ್ಥ್ಯ ಸಂಕಲ್ಪ' ಕಾರ್ಯಕ್ರಮ

ಕಡಬ: ಇಂದಿನ ಯುವಜನತೆ ಫ್ಯಾಷನ್ ಜೀವನಶೈಲಿ ಹಾಗೂ ಕೆಟ್ಟ ಸಹವಾಸದ ಪರಿಣಾಮವಾಗಿ ಮಾದಕ ವ್ಯಸನಗಳ ಬಲೆಗೆ ಬೀಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರೆ ಅವರು ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಸದಾನಂದ ನಾಗಪ್ಪ ನಾಯ್ಕ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಕಡಬ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು ಹಾಗೂ ಪುತ್ತೂರು ವಕೀಲರ ಸಂಘದ ಆಶ್ರಯದಲ್ಲಿ, ಸವಣೂರು ಜೂನಿಯರ್ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡ್ರಗ್ಸ್ ಎನ್ನುವುದು ಕ್ಯಾನ್ಸರ್‌ನಷ್ಟೇ ಮಾರಕವಾಗಿದ್ದು, ವ್ಯಕ್ತಿಯ ಬದುಕನ್ನು ಸಂಪೂರ್ಣ ಹಾಳುಮಾಡುತ್ತದೆ. ಮಾದಕ ವಸ್ತುಗಳಿಗೆ ಸಂಬಂಧಿಸಿದ ಆಕರ್ಷಕ ಜಾಹೀರಾತುಗಳಿಂದ ದೂರವಿದ್ದು, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ತಮ್ಮ ಬದುಕನ್ನು ರೂಪಿಸಿದ ತಂದೆ-ತಾಯಿ ಹಾಗೂ ಶಿಕ್ಷಕರನ್ನು ಗೌರವಿಸಬೇಕು. ಸವಣೂರು ಶಿಕ್ಷಣ ಸಂಸ್ಥೆ ಕಳೆದ ಮೂರು ವರ್ಷಗಳಿಂದ ಶೇ.100 ಫಲಿತಾಂಶ ದಾಖಲಿಸಿರುವ ಹೆಗ್ಗಳಿಕೆಯನ್ನು ಮುಂದುವರಿಸಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಿ. ಜಗನ್ನಾಥ ರೈ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದರು.

ಕಡಬ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ರಾಕೇಶ್ ರೈ ಕೆಡೆಂಜಿ ಮಾತನಾಡಿ, ಮಾದಕ ವ್ಯಸನದ ಹತ್ತಿರಕ್ಕೂ ಹೋಗದೆ ಆರೋಗ್ಯಕರ ಜೀವನ ನಡೆಸುವ ಸಂಕಲ್ಪ ಮಾಡಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬದ ನಿಕಟಪೂರ್ವ ಅಧ್ಯಕ್ಷ ಮಹೇಶ್ ಕೆ. ಸವಣೂರು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿ ಇಟ್ಟುಕೊಂಡು ನಿರಂತರ ಅಧ್ಯಯನ ಮತ್ತು ಪರಿಶ್ರಮದ ಮೂಲಕ ಯಶಸ್ಸು ಸಾಧಿಸಬೇಕು. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಆದರ್ಶ ಜೀವನ ನಡೆಸಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವ್ಯಸನಗಳಿಂದ ದೂರವಿದ್ದು, ತಂದೆ-ತಾಯಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಶಿಕ್ಷಣವು ಬದುಕನ್ನು ಕಟ್ಟಿಕೊಳ್ಳಲು ಇರುವುದೇ ಹೊರತು ಹಾಳುಮಾಡಿಕೊಳ್ಳಲು ಅಲ್ಲ. ವ್ಯಸನಕ್ಕೆ ಬಲಿಯಾದ ವ್ಯಕ್ತಿ ತನ್ನ ಸಂಬಂಧಗಳು ಹಾಗೂ ವ್ಯಕ್ತಿತ್ವವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಆದ್ದರಿಂದ ಎಲ್ಲರೂ ವ್ಯಸನಮುಕ್ತ ಜೀವನದತ್ತ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಸವಣೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾರ್ಯಾಧ್ಯಕ್ಷ ಗಿರಿಶಂಕರ ಸುಲಾಯ, ಪ್ರಾಂಶುಪಾಲೆ ಪದ್ಮಾವತಿ, ಸವಣೂರು ಯುವಕ ಮಂಡಲದ ಅಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪ್ರಕಟಿತ ಕಾನೂನು ಪುಸ್ತಕಗಳನ್ನು ಸವಣೂರು ಜೂನಿಯರ್ ಕಾಲೇಜಿನ ಗ್ರಂಥಾಲಯಕ್ಕೆ ಹಸ್ತಾಂತರಿಸಿ, ಪ್ರಾಂಶುಪಾಲೆ ಪದ್ಮಾವತಿಗೆ ನೀಡಿದರು.

ಸವಣೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಮುಖ್ಯಶಿಕ್ಷಕಿ ಶ್ರೀಲತಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ಕಿಶಾನ್ ಬಿ.ವಿ. ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸವಣೂರು ವಲಯದ ಮೇಲ್ವಿಚಾರಕಿ ಹೇಮಲತಾ ವಂದಿಸಿದರು. ಕಾನೂನು ಸೇವೆಗಳ ಸಮಿತಿಯ ಸಿಬ್ಬಂದಿ ಜ್ಯೋತಿ, ಸೇವಾ ಪ್ರತಿನಿಧಿಗಳಾದ ಅಮಿತಾ ಹಾಗೂ ಮೀನಾಕ್ಷಿ ಸೇರಿದಂತೆ ಹಲವರು ಸಹಕರಿಸಿದರು.

 

Leave a Reply

error: Content is protected !!