










ಕೊಕ್ಕಡ: ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ (ರಿ.) ಸಂಸ್ಥೆಯು ತನ್ನ ‘ಕಾರುಣ್ಯ ಸ್ಪರ್ಶಂ’ ಯೋಜನೆಯಡಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕೆರೆಕೋಡಿ ನಿವಾಸಿ ಚಿನ್ನಮ್ಮ, ಕೊಚ್ಚುಪರಂಬಿಲ್ ಅವರ ಚಿಕಿತ್ಸೆಗೆ ₹50 ಸಾವಿರ ಧನಸಹಾಯವನ್ನು ನೀಡಿ ಮಾನವೀಯತೆ ಮೆರೆದಿದೆ.
ಧನಸಹಾಯದ ಚೆಕ್ ಅನ್ನು ಚಿನ್ನಮ್ಮ ಅವರ ಸೊಸೆಯಾದ ಸೌಮ್ಯ ಅವರಿಗೆ ಸಂಘದ ಪದಾಧಿಕಾರಿಗಳು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಗಸ್ಟೀನ್ ಟಿ.ಎ., ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಸಂಘಟನೆಯ ಪ್ರಮುಖ ಧ್ಯೇಯವಾಗಿದ್ದು, ಸಮಾಜದ ಅಗತ್ಯವಿರುವವರ ನೆರವಿಗೆ ಸದಾ ಸ್ಪಂದಿಸುವ ಕಾರ್ಯವನ್ನು ಮುಂದೆಯೂ ನಿರಂತರವಾಗಿ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಸಂಘದ ಗೌರವಾಧ್ಯಕ್ಷ ಸೆಬಾಸ್ಟಿಯನ್ ಪಿ.ಟಿ. ಮಾತನಾಡಿ, ಸದಸ್ಯರು ಹಾಗೂ ದಾನಿಗಳ ಉದಾರ ಸಹಕಾರದಿಂದ ಈ ಧನಸಹಾಯವನ್ನು ನೀಡಲು ಸಾಧ್ಯವಾಗಿದೆ. ಈ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಿದ ಎಲ್ಲ ದಾನಿಗಳು, ಸದಸ್ಯರು ಹಾಗೂ ಹಿತೈಷಿಗಳಿಗೆ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಕಾರ್ಯದರ್ಶಿ ಶಿಜೋ ಜೋಸೆಫ್ ಮಾತನಾಡಿ, ‘ಕಾರುಣ್ಯ ಸ್ಪರ್ಶಂ’ ಯೋಜನೆಗೆ ಸದಸ್ಯರು, ದಾನಿಗಳು ಮತ್ತು ಹಿತೈಷಿಗಳು ನೀಡಿದ ಉತ್ತಮ ಸ್ಪಂದನೆಯಿಂದ ಈ ಮಾನವೀಯ ಸೇವೆ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿಯೂ ಸಂಕಷ್ಟದಲ್ಲಿರುವ ಬಡ ಹಾಗೂ ಅಗತ್ಯವಿರುವ ಕುಟುಂಬಗಳ ನೆರವಿಗೆ ಸಂಘವು ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು ಹಾಗೂ ಸದಸ್ಯರು ಉಪಸ್ಥಿತರಿದರು.



