ಕೊಕ್ಕಡ: ಅಗ್ನಿವೀರ್‌ಗೆ ಆಯ್ಕೆಯಾದ ಭರತ್‌ಗೆ ಕಪಿಲ ಕೇಸರಿ ಯುವಕ ಮಂಡಲದಿಂದ ಸನ್ಮಾನ

ಶೇರ್ ಮಾಡಿ

 

ಕೊಕ್ಕಡ: ಅಗ್ನಿವೀರ್‌ಗೆ ಆಯ್ಕೆಯಾದ ಭರತ್‌ಗೆ ಕಪಿಲ ಕೇಸರಿ ಯುವಕ ಮಂಡಲದಿಂದ ಸನ್ಮಾನ

ಕೊಕ್ಕಡ: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯಡಿ ಭಾರತೀಯ ಸಶಸ್ತ್ರ ಪಡೆ (ಅಗ್ನಿವೀರ್)ಗೆ ಆಯ್ಕೆಯಾದ ಹತ್ಯಡ್ಕ ಗ್ರಾಮದ ಹೊಸತೋಟ ಮುಂಡ್ರೆಲು ನಿವಾಸಿ ಭರತ್ ಅವರನ್ನು ಕುಂಟಲಪಲ್ಕೆ ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ ಅವರ ಸ್ವಗೃಹದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಭರತ್ ಅವರ ಸಾಧನೆಯನ್ನು ಅಭಿನಂದಿಸಿದ ಮಂಡಲದ ಪದಾಧಿಕಾರಿಗಳು ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಅವರ ತಾಯಿ ಹೇಮಾವತಿ ಅವರನ್ನೂ ಸನ್ಮಾನಿಸಿ ಅಭಿನಂದಿಸಲಾಯಿತು. ಭರತ್ ಅವರು ಹೇಮಾವತಿ ಹಾಗೂ ಸುಂದರ ಗೌಡ ದಂಪತಿಯ ಪುತ್ರರಾಗಿದ್ದಾರೆ.

ಮುಖ್ಯ ಅತಿಥಿಗಳಾಗಿ ಹತ್ಯಡ್ಕ ಗ್ರಾಮದ ನಿವೃತ್ತ ಯೋಧ ಮೋಹನ ಶೆಟ್ಟಿ ಮುದ್ದಿಗೆ ಹಾಗೂ ಮಹಾಬಲ ಮುದ್ದಿಗೆ ಅವರು ತಮ್ಮ ಸೇನಾ ಸೇವೆಯ ಅನುಭವಗಳನ್ನು ಹಂಚಿಕೊಂಡು, ದೇಶಸೇವೆಯ ಮಹತ್ವವನ್ನು ವಿವರಿಸಿದರು. ಭರತ್ ಅವರು ಭಾರತೀಯ ಸಶಸ್ತ್ರ ಪಡೆಯ ಸೇವೆಯಲ್ಲಿ ಯಶಸ್ಸು ಸಾಧಿಸಿ ಗ್ರಾಮದ ಹಾಗೂ ದೇಶದ ಹೆಮ್ಮೆಯಾಗಲಿ ಎಂದು ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಭರತ್, ಕಪಿಲ ಕೇಸರಿ ಯುವಕ ಮಂಡಲವು ಈ ಹಿಂದೆ ಸೇನೆಗೆ ಸೇರಲು ಆಸಕ್ತಿ ಹೊಂದಿದ ಯುವಕರಿಗಾಗಿ ಆಯೋಜಿಸಿದ್ದ ವಿಶೇಷ ಕಾರ್ಯಾಗಾರವು ತಮ್ಮ ಜೀವನದಲ್ಲಿ ಮಹತ್ವದ ತಿರುವು ನೀಡಿತು. ಆ ಕಾರ್ಯಾಗಾರದಿಂದ ಸೂಕ್ತ ಮಾರ್ಗದರ್ಶನ, ಆತ್ಮವಿಶ್ವಾಸ ಹಾಗೂ ಅಗತ್ಯ ಮಾಹಿತಿ ದೊರೆತ ಪರಿಣಾಮ ಅಗ್ನಿವೀರ್ ಆಯ್ಕೆ ಪ್ರಕ್ರಿಯೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಯಿತು ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಪಿಲ ಕೇಸರಿ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಗೌಡ ಬೊಳ್ಳೋಡಿ ವಹಿಸಿದ್ದರು. ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ಮತ್ತು ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಭರತ್ ಅವರಿಗೆ ಶುಭ ಹಾರೈಸಿದರು.

ಕಾರ್ಯದರ್ಶಿ ಸುಮಂತ್ ಗೌಡ ಅಳಕ್ಕೆ ಸ್ವಾಗತಿಸಿ, ವಂದಿಸಿದರು.

 

Leave a Reply

error: Content is protected !!