ಅಡ್ಡಹೊಳೆ: ಹಿಟ್ ಅಂಡ್ ರನ್ ದುರಂತ: ಲಾರಿ ಡಿಕ್ಕಿಗೆ ಮಹಿಳೆ ಸಾವು – ಮತ್ತೋರ್ವರಿಗೆ ಗಂಭೀರ ಗಾಯ; ಚಾಲಕ ಪರಾರಿ

ಶೇರ್ ಮಾಡಿ

 

ಅಡ್ಡಹೊಳೆಯಲ್ಲಿ ಹಿಟ್ ಅಂಡ್ ರನ್ ದುರಂತ: ಲಾರಿ ಡಿಕ್ಕಿಗೆ ಮಹಿಳೆ ಸಾವು – ಮತ್ತೋರ್ವರಿಗೆ ಗಂಭೀರ ಗಾಯ; ಚಾಲಕ ಪರಾರಿ

ನೆಲ್ಯಾಡಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆ ಸಮೀಪ ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ಹಿಟ್ ಅಂಡ್ ರನ್ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮತ್ತೋರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಅಪಘಾತಕ್ಕೆ ಕಾರಣವಾದ ಲಾರಿ ಚಾಲಕ ವಾಹನವನ್ನು ನಿಲ್ಲಿಸದೆ ಪರಾರಿಯಾಗಿರುವ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೃತರನ್ನು ಉಡುಪಿ ಜಿಲ್ಲೆಯ ಸಾಲಿಗ್ರಾಮ ಗ್ರಾಮದ ಕಾರ್ಕಡ ನಿವಾಸಿ ವಾಗ್ದೇವಿ (77) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ವರಲಕ್ಷ್ಮಿ ಅವರು ಉಡುಪಿಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿದ್ದ ಸಂಜೀವಿನಿ ಮಯ್ಯ, ಪಾರ್ಥೇಶ್ ಹಾಗೂ ಕಾರು ಚಾಲಕ ಗುರುರಾಜ್ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ.

ಸಂಜೀವಿನಿ ಮಯ್ಯ ಅವರು ತಮ್ಮ ತಾಯಿ ವಾಗ್ದೇವಿ, ತಂಗಿ ವರಲಕ್ಷ್ಮಿ ಹಾಗೂ ತಂಗಿಯ ಮಗ ಪಾರ್ಥೇಶ್ ಅವರೊಂದಿಗೆ ಗುರುರಾಜ್ ಚಾಲನೆ ಮಾಡುತ್ತಿದ್ದ ಕಾರಿನಲ್ಲಿ ಧರ್ಮಸ್ಥಳ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನಕ್ಕಾಗಿ ತೆರಳುತ್ತಿದ್ದರು. ಬೆಳಿಗ್ಗೆ ಧರ್ಮಸ್ಥಳದಲ್ಲಿ ದೇವರ ದರ್ಶನ ಮುಗಿಸಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ವೇಳೆ, ಶಿರಾಡಿ ಗ್ರಾಮದ ಅಡ್ಡಹೊಳೆ ಸಮೀಪ ಎದುರಿನಿಂದ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಲಾರಿಯೊಂದು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ರಸ್ತೆಯ ಬಲಭಾಗಕ್ಕೆ ನುಗ್ಗಿ ಕಾರಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕಾರು ರಸ್ತೆಯ ಎಡಭಾಗಕ್ಕೆ ಉರುಳಿ ಬಿದ್ದ ಪರಿಣಾಮ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರು ಗಂಭೀರವಾಗಿ ಗಾಯಗೊಂಡರು. ವಾಗ್ದೇವಿ ಅವರಿಗೆ ತಲೆ, ಬೆನ್ನು ಹಾಗೂ ಕಾಲಿಗೆ ತೀವ್ರ ಗಾಯಗಳಾಗಿದ್ದು, ವರಲಕ್ಷ್ಮಿ ಅವರ ಸೊಂಟಕ್ಕೆ ಗಂಭೀರ ಪೆಟ್ಟಾಗಿದೆ.

ಅಪಘಾತದ ತಕ್ಷಣ ಸ್ಥಳೀಯ ಸಾರ್ವಜನಿಕರು ಹಾಗೂ ವಾಹನ ಸವಾರರು ಗಾಯಾಳುಗಳನ್ನು ರಕ್ಷಿಸಿ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರ ಸಲಹೆ ಮೇರೆಗೆ ವಾಗ್ದೇವಿ ಹಾಗೂ ವರಲಕ್ಷ್ಮಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಅಂಬುಲೆನ್ಸ್ ಮೂಲಕ ಉಡುಪಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ವಾಗ್ದೇವಿ ಮೃತಪಟ್ಟಿದ್ದಾರೆ.

ಅಪಘಾತಕ್ಕೆ ಕಾರಣವಾದ ಲಾರಿ ಚಾಲಕ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ, ಗಾಯಾಳುಗಳಿಗೆ ಯಾವುದೇ ನೆರವು ನೀಡದೇ ಹಾಗೂ ಪೊಲೀಸರಿಗೆ ಮಾಹಿತಿ ನೀಡದೇ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಲಾರಿ ಚಾಲಕ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

 

Leave a Reply

error: Content is protected !!